ನವದೆಹಲಿ: ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಸತ್ಯಪಾಲ್ ಮಲಿಕ್ ಅವರನ್ನು ಹಠಾತ್ತನೆ ವರ್ಗಾವಣೆ ಮಾಡಲಾಗಿದ್ದು, ಗೋವಾ ರಾಜ್ಯಪಾಲರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಇದೀಗ ಜಮ್ಮು-ಕಾಶ್ಮೀರ ಹಾಗೂ ಲಡಾಖ್ಗೆ ಮಾಜಿ ಐಎಎಸ್ ಅಧಿಕಾರಿಗಳಾಗಿರುವ ಗಿರೀಶ್ ಚಂದ್ರ ಮುರ್ಮು ಹಾಗೂ ರಾಧಾ ಕೃಷ್ಣ ಮಾಥೂರ್ ಲೆಪ್ಟಿನೆಂಟ್ ಗವರ್ನರ್ ಆಗಿ ನೇಮಕಗೊಂಡಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದು ಗೊಳಿಸಿದ ಬಳಿಕ ಅಕ್ಟೋಬರ್ 31ರಂದು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಲಾಗಿತ್ತು. ಈ ಹಿಂದೆ ಬಿಹಾರದ ಗವರ್ನರ್ ಆಗಿದ್ದ ಸತ್ಯಪಾಲ್ ಮಲಿಕ್ 2018ರಲ್ಲಿ ಒಡಿಶಾದ ಹೆಚ್ಚುವರಿ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. 1980-86 ಹಾಗೂ 1986-1992ರಲ್ಲಿ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದ ಇವರು, 1974-1977ರಲ್ಲಿ ಉತ್ತರಪ್ರದೇಶದ ಅಸೆಂಬ್ಲಿ ಸದಸ್ಯರಾಗಿದ್ದರು.
ಇದೀಗ ಜಮ್ಮು-ಕಾಶ್ಮೀರಕ್ಕೆ ಲೆಪ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ ಗಿರೀಶ್ ಚಂದ್ರ ಮುರ್ಮು 1985ರ ಐಎಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಕೇಂದ್ರ ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜತೆಗೆ ಮೋದಿ ಗುಜರಾತ್ ಸಿಎಂ ಆಗಿದ್ದ ವೇಳೆ ಅಲ್ಲಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ಲೆಪ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ ರಾಧಾಕೃಷ್ಣ ಮಾಥೂರ್ ಕೂಡ 1977ರ ಐಎಎಸ್ ಬ್ಯಾಚ್ನ ಅಧಿಕಾರಿಯಾಗಿದ್ದು, ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಇದರ ಮಧ್ಯೆ ಮಿಜೋರಾಂದ ಗವರ್ನರ್ ಆಗಿ ಪಿಎಸ್ ಶ್ರೀಧರನ್ ಆಯ್ಕೆಯಾಗಿದ್ದಾರೆ.