ದೆಹಲಿ: ಧಾರ್ಮಿಕ ಆಚರಣೆಗಳ ಹೆಸರಲ್ಲಿ ಪ್ರಾಣಿ ಬಲಿ ಕೊಡುವುದು ಹಾಗೂ ಕಸಾಯಿ ಖಾನೆ ಬಂದ್ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಕ್ರೌರ್ಯ ತಡೆಗಟ್ಟುವ ಕಾಯ್ದೆ 1960 ಉಲ್ಲಂಘನೆಯಾಗಿದ್ದಲ್ಲಿ ಪರಿಶೀಲಿಸಿ ಕೇಂದ್ರ, ರಾಜ್ಯ ಸರ್ಕಾರಗಳೇ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಕೋರಿಕೆ ವಿಸ್ತಾರವಾಗಿದ್ದು, ನಿರ್ದೇಶನ ನೀಡುವುದು ಕಷ್ಟಕರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪರಿಸರ ಜಾರಿ (ಸಂರಕ್ಷಣೆ) ಕಾಯ್ದೆ 1986, ಅರಣ್ಯ (ಸಂರಕ್ಷಣೆ) ಕಾಯ್ದೆ1980, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಭಾರತೀಯ ಅರಣ್ಯ ಕಾಯ್ದೆ 1972 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ1960 ನ್ನ ಕೋರ್ಟ್ ಪರಿಶೀಲಿಸಿದೆ. ಶಾಸಕಾಂಗದ ಆಶಯವನ್ನ ಜಾರಿಗೆ ತರುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದೆ. ಕ್ರೌರ್ಯ ತಡೆಗಟ್ಟುವ ಕಾಯ್ದೆ 1960 ರ ಉಲ್ಲಂಘನೆ ವೇಳೆ, ಸಮಸ್ಯೆ ಪರಿಶೀಲಿಸಲು ಮಾರ್ಪಾಡುಗಳ ಅಗತ್ಯವಿದೆಯೇ? ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟೀಕರಣ ನೀಡಬೇಕೆಂದು ಕೋರ್ಟ್ ಸೂಚಿಸಿದೆ.
ಕೇರಳದ ಕೆರೆಲಾದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ತುಂಬಿದ್ದ ಹಣ್ಣು ತಿಂದು ಮೃತಪಟ್ಟಿದ್ದ ಹಿನ್ನೆಲೆ, ಮ್ಯಾಥ್ಯೂಸ್ ಜೆ ನೆಡುಂಪರಾ ಎಂಬುವರು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ಈ ದೇಶದಲ್ಲಿ ಕಾಡು ಮತ್ತು ಸಾಕು ಪ್ರಾಣಿಗಳು ಚಿತ್ರಹಿಂಸೆಗೆ ಒಳಗಾಗುತ್ತಿವೆ. ಮಾನವ ತನ್ನ ಅತಿಯಾಸೆಗೆ ಕಾಡುಗಳನ್ನ ನಾಶ ಮಾಡಿದ್ದು, ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಇದು ಮನುಷ್ಯ ಮತ್ತು ಪ್ರಾಣಿಗಳ ಸಂಘರ್ಷಕ್ಕೆ ಕಾರಣವಾಗಿದೆ ಅಂತಾ ಅರ್ಜಿದಾರರು ವಾದಿಸಿದರು. ರೈತರು, ಕಾಡು ಪ್ರಾಣಿಗಳಿಂದ ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನ ರಕ್ಷಿಸಲು ಕ್ರ್ಯಾಕರ್ಸ್, ವಿಷ ತುಂಬಿದ ಹಣ್ಣುಗಳು ಇತ್ಯಾದಿಗಳನ್ನ ಬಳಸುತ್ತಾರೆ. ಇದು ಪ್ರಾಣಿಗಳ ಸಾವಿಗೆ ಕಾರಣವಾಗುತ್ತೆ ಎಂದಿದ್ದಾರೆ.
ಈ ವಿಚಾರಣೆಯಲ್ಲಿ ಕೇಂದ್ರ, ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.