ಚೆನ್ನೈ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಮಧ್ಯಾಹ್ನ PSLV-C 49 ರಾಕೆಟ್ಅನ್ನು ಉಡಾವಣೆ ಮಾಡಲು ತಯಾರಿ ನಡೆಸಿದೆ.
ನಾಳೆ ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಶ್ರೀಹರಿಕೋಟಾದ ಮೊದಲ ಲಾಂಚ್ ಪ್ಯಾಡ್ನಲ್ಲಿ ರಾಕೆಟ್ ಉಡಾವಣೆ ಮಾಡಲಾಗುತ್ತದೆ. ಪಿಎಸ್‌ಎಲ್‌ವಿ ರಾಕೆಟ್ ಅಮೆರಿಕಾ, ಲಿಥುವಾನಿಯಾ, ಲುಕ್ಸೆಂಬರ್ಗ್ ದೇಶಗಳ 9 ಉಪಗ್ರಹಗಳನ್ನು ಹೊತ್ತು ಸಾಗಲಿದೆ. PSLV-C 49 ಕಾರ್ಯಾಚರಣೆಯಲ್ಲಿ ಇಒಎಸ್-01 ಪ್ರಾಥಮಿಕ ಪೇಲೋಡ್ ಆಗಿದೆ. ಇದು ಸಿಂಥೆಟಿಕ್ ಅಪರ್ಚರ್ ರಾಡಾರ್ ವೆದರ್ ಇಮೇಜಿಂಗ್ ಉಪಗ್ರಹವಾಗಿದ್ದು, ಎಲ್ಲ ರೀತಿಯ ಹವಾಮಾನದಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ಭಾರತದ ರಿಸಾಟ್ ಸರಣಿಯ ಇಮೇಜಿಂಗ್ ಉಪಗ್ರಹಗಳ ಒಂದು ಭಾಗವಾಗಿದೆ.
ಉಪಗ್ರಹವನ್ನು ಈ ಮೊದಲು ರಿಸಾಟ್ - 2 ಬಿಆರ್2 (RISAT-2BR2) ಎಂದು ಕರೆಯಲಾಗುತ್ತಿತ್ತು. ಬಳಿಕ ಯೋಜನೆಗೆ ಅನುಗುಣವಾಗಿ ಇಸ್ರೋ EOS ಎಂದು ಮರು ನಾಮಕರಣ ಮಾಡಿತು. ಈ ಉಪಗ್ರಹವು ಅರಣ್ಯ, ಕೃಷಿ ಮತ್ತು ವಿಪತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ. ಸಿ-49 ಮಿಷನ್ ಪಿಎಸ್‌ಎಲ್‌ವಿಯ 51 ನೇ ಮಿಷನ್ ಮತ್ತು ಡಿಎಲ್ ಕಾನ್ಫಿಗರೇಶನ್‌ನಲ್ಲಿ ಹಾರಾಟ ನಡೆಸುವ ಎರಡನೆಯದ್ದಾಗಿದೆ.
2020 ಪ್ರಾರಂಭದಲ್ಲೇ ರಾಕೆಟ್ ಉಡಾವಣೆಗೆ ತಯಾರಿ ನಡೆಸಲಾಗಿತ್ತು. ಆದರೆ, ಕೋವಿಡ್ ಬಿಕ್ಕಟ್ಟಿನಿಂದ ಮುಂದೂಡಲಾಯಿತು. ಉಡಾವಣೆ ವೇಳೆ ಕೇವಲ 100 ಜನರು ಪಾಲ್ಗೊಳ್ಳಲು ಮಾತ್ರ ಅವಕಾಶವಿದ್ದು, ಉಡಾವಣಾ ಗ್ಯಾಲರಿಯನ್ನು ಮುಚ್ಚಲಾಗಿದೆ.