ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-2 ಯೋಜನೆಯ ಲ್ಯಾಂಡಿಂಗ್ ವೇಳೆ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆಹಚ್ಚಿ ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸುವುದು ಸಾಧ್ಯ ಎಂದು ಅಮೆರಿಕದ ಬಾಹ್ಯಾಕಾಶ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಜಾಗತಿಕ ಬಾಹ್ಯಾಕಾಶ ಸಪ್ತಾಹ ಆಚರಣೆಯಲ್ಲಿ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಬಾಹ್ಯಾಕಾಶ ನೌಕೆ ವ್ಯವಸ್ಥೆಯ ಎಂಜಿನಿಯರಿಂಗ್ ವ್ಯವಸ್ಥಾಪಕ ಆನ್ ಡೆವೆರೆಕ್ಸ್ ಮಾತನಾಡಿ, 'ಇಸ್ರೋ ವಿಜ್ಞಾನಿಗಳು ತಮ್ಮೊಂದಿಗೆ ಸಂಪರ್ಕ ಕಡಿದುಕೊಂಡ ವಿಕ್ರಮ್ ಲ್ಯಾಂಡರ್ ಜತೆಗೆ ಮರುಸಂವಹನ ನಡೆಸಿ ಚಂದ್ರಯಾನದ ವ್ಯೋಮ ನೌಕೆಯೊಂದಿಗೆ ಮಾತನಾಡಬಹುದು' ಎಂದು ಭರವಸೆ ತುಂಬಿದರು.
ಸೆಪ್ಟೆಂಬರ್ 7ರ ನಸುಕಿನಂದು ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ಸುಮಾರು ಒಂದು ತಿಂಗಳ ಕಳೆದರೂ ಸಂವಹನ ನಡೆಸುವುದನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಗಮನಿಸಿದ ಡೆವೆರೆಕ್ಸ್, ಲಿಂಕ್ ಸ್ನ್ಯಾಪ್ ಆಗುವವರೆಗೆ ಅದರಿಂದ ಪಡೆದ ಡೇಟಾ ಸ್ಕ್ಯಾನ್ ಮಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ. ದೂರ ಇರುವಾಗ ಲ್ಯಾಂಡರ್ ಇಸ್ರೋದ ಇಸ್ಟ್ರಾಕ್ನಿಂದ (ಸ್ಯಾಟಲೈಟ್ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಸೆಂಟರ್) ಸಂಪರ್ಕ ಕಳೆದುಕೊಂಡಿತು. ವಿಕ್ರಮ್ಗೆ ಏನಾಗಿದೆ ಎಂದು ತಿಳಿಸಿದುಕೊಳ್ಳಲು ಇಸ್ರೋ, ರಾಷ್ಟ್ರೀಯ ತಜ್ಞರ ಸಮಿತಿಯನ್ನು ರಚಿಸಿದೆ. ಇಳಿಯುವಾಗ ಏನಾಯಿತು ಮತ್ತು ಅದು ಹೇಗೆ (ವಿಕ್ರಮ್) ಚಂದ್ರನ ಮೇಲ್ಮೈಗೆ ಬಡಿಯಿತು, ಎಲ್ಲಿದೆ ಎಂಬುದು ನಮಗೆ ನಿಜವಾಗಿಯೂ ತಿಳಿದಿಲ್ಲ ಎಂದ ಡೆವೆರೆಕ್ಸ್, ಮಿಷನ್‌ನ ನಿಗದಿತ ಪ್ರಮಾಣ, ಸಮಯ ಮತ್ತು ಸ್ಥಳವನ್ನು ಗುರುತು ಮಾಡಿ ಒಮ್ಮೆ ವಿಫಲವಾದರೇ ಅದು ಮತ್ತೆ ತಿಳಿಯುವುದಿಲ್ಲ ಎಂದರು.