ಮುಂಬೈ: ದಾವೂದ್ ಇಬ್ರಾಹಿಂ ಆಪ್ತ ಇಕ್ಬಾಲ್ ಮಿರ್ಚಿಗೆ ಸಂಬಂಧಿಸಿದ 500 ಕೋಟಿ ರೂ. ಮೌಲ್ಯದ ಮೂರು ಕಟ್ಟಡಗಳನ್ನ ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.
ಮಿರ್ಚಿ ಮಾದಕವಸ್ತು ಕಳ್ಳಸಾಗಣೆ ಮತ್ತು ಸುಲಿಗೆ ದಂಧೆಯಲ್ಲಿ ದಾವೂದ್ ಇಬ್ರಾಹಿಂನ ಬಲಗೈ ಬಂಟನಾಗಿದ್ದ ಎನ್ನಲಾಗುತ್ತಿದೆ. ಮುಂಬೈನ ವರ್ಲಿಯಲ್ಲಿರುವ ರಬಿಯಾ ಮ್ಯಾನ್ಷನ್, ಮರಿಯಮ್ ಲಾಡ್ಜ್ ಹಾಗೈ ಸೀ ವ್ಯೂ ಎಂಬ ಮೂರು ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮೂರೂ ಕಟ್ಟಡಗಳ ಸದ್ಯದ ಮಾರುಕಟ್ಟೆ ಬೆಲೆ 500 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
1976ರ ಸ್ಮಗ್ಲರ್ಸ್ ಅಂಡ್ ಫಾರೀನ್ ಎಕ್ಸ್ಚೇಂಜ್ ಮ್ಯಾನಿಪುಲೇಟರ್ಸ್ ಆ್ಯಕ್ಟ್ನಡಿ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಟ್ಟಡಗಳ ಮಾಲೀಕತ್ವದ ಬಗ್ಗೆ ಇಕ್ಬಾಲ್ ತಪ್ಪು ಮಾಹಿತಿ ನೀಡಿದ್ದ ಎಂದು ಇಡಿ ತಿಳಿಸಿದೆ.
2013ರಲ್ಲಿ ಲಂಡನ್ನಲ್ಲಿ ಮೃತಪಟ್ಟ ಮಿರ್ಚಿ, ಅವರ ಕುಟುಂಬ ಮತ್ತು ಇತರರ ವಿರುದ್ಧ ಇಡಿ ಅಕ್ರಮ ಹಣ ವಹಿವಾಟು ಪ್ರಕರಣ ದಾಖಲಿಸಿತ್ತು.