ನವದೆಹಲಿ: ಶ್ರೀ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ಕೆ ಈಗಾಗಲೇ ಎಲ್ಲ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಆಗಸ್ಟ್ 5ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಶಿಲಾನ್ಯಾಸ ನಡೆಸಲಿದ್ದಾರೆ.
ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿಬೆನ್, ಎಲ್ಕೆ ಅಡ್ವಾಣಿ ಸೇರಿದಂತೆ 175 ಪ್ರಮುಖರು ಭಾಗಿಯಾಗಲಿದ್ದು, ಈಗಾಗಲೇ ಎಲ್ಲರಿಗೂ ಆಮಂತ್ರಣ ಪತ್ರಿಕೆ ರವಾನೆ ಮಾಡಲಾಗುತ್ತಿದೆ.
![Iqbal Ansari gets first invite to Ayodhya Event](https://etvbharatimages.akamaized.net/etvbharat/prod-images/ypueayypzf_0308newsroom_1596455849_523.jpg)
ವಿಶೇಷವೆಂದರೆ ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಲು ಮೊದಲ ಆಮಂತ್ರಣ ಪತ್ರಿಕೆಯನ್ನ ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ಅಪೀಲುದಾರ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಶ್ರೀರಾಮನ ಇಚ್ಛೆಯಂತೆ ನಾನು ಮೊದಲ ಆಮಂತ್ರಣ ಪತ್ರಿಕೆ ಪಡೆದುಕೊಂಡಿದ್ದೇನೆ. ಇದು ಮತ್ತಷ್ಟು ಸಂತಸ ಮೂಡಿಸಿದೆ ಎಂದಿದ್ದಾರೆ. ಅಯೋಧ್ಯೆ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ 1949ರಲ್ಲಿ ಕೇಸು ಹಾಕಿದ್ದ ಹಶೀಂ ಅನ್ಸಾರಿ ಮಗನಾಗಿರುವ ಇಕ್ಬಾಲ್ ಅನ್ಸಾರಿ ತಮ್ಮ ತಂದೆ ತೀರಿಕೊಂಡ ಬಳಿಕ ಬಾಬ್ರಿ ಮಸೀದಿ ವಿಚಾರವಾಗಿ ಕಾನೂನು ಹೋರಾಟ ನಡೆಸಿದ್ದರು.
ಈಗಾಗಲೇ ಹಶೀಮ್ ಅನ್ಸಾರಿ ನಿಧನರಾಗಿರುವ ಕಾರಣ ಅವರ ಮಗನಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅದನ್ನ ಸ್ವಾಗತ ಮಾಡಿದ್ದಾಗಿ ಹೇಳಿದ್ದ ಇವರು, ಇದೀಗ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ.