ಪಿಥೋರಗಢ್ (ಉತ್ತರಾಖಂಡ): ಭಾರತೀಯ ಬ್ಯಾಂಕುಗಳಿಂದ ಪಿಂಚಣಿ ತೆಗೆದುಕೊಳ್ಳುವ ನೇಪಾಳಿ ಪಿಂಚಣಿದಾರರಿಗೆ ಮೂರು ತಿಂಗಳಿನಿಂದ ಯಾವುದೇ ಪಿಂಚಣಿ ಬಂದಿರಲಿಲ್ಲ. ಆದರೆ, ಇದೀಗ ಅವರಿಗಾಗಿ ಹೊಸ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಅದೇನೆಂದರೆ ನೇಪಾಳಿ ಪಿಂಚಣಿದಾರರಿಗೆ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ತೂಗು ಸೇತುವೆಗಳನ್ನು ತೆರೆಯಲಾಗುವುದು. ಭಾರತ ಮತ್ತು ನೇಪಾಳದಲ್ಲಿ ಲಾಕ್ಡೌನ್ ಹಿನ್ನೆಲೆ ಮೂರು ತಿಂಗಳಿನಿಂದ ಸೇತುವೆ ಬಂದ್ ಮಾಡಲಾಗಿತ್ತು.
ಧಾರ್ಚುಲಾ, ಜೌಲ್ಜಿಬಿ ಮತ್ತು ಜುಲಘಾಟ್ ಸೇತುವೆಗಳನ್ನು ನಿಗದಿತ ಸಮಯಕ್ಕೆ ಜುಲೈ 8 ರಿಂದ 10 ರವರೆಗೆ ತೆರೆಯಲಾಗುವುದು. ಈ ಸಮಯದಲ್ಲಿ ಇತರ ಜನರ ಓಡಾಟಕ್ಕೆ ಯಾವುದೇ ಅವಕಾಶ ಇರುವುದಿಲ್ಲ.
ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ನೇಪಾಳದಿಂದ ಭಾರತಕ್ಕೆ ಬರಲು ಸೇತುವೆಗಳನ್ನು ತೆರೆಯಲಾಗುವುದು. ಬಳಿಕ ಸಂಜೆ 3ರಿಂದ 6ರವರೆಗೆ ಹಿಂತಿರುಗಲು ಸೇತುವೆಗಳನ್ನು ತೆರೆಯಲಾಗುವುದು. ಆರೋಗ್ಯ ಇಲಾಖೆ ತಂಡವು ನೇಪಾಳದಿಂದ ಬರುವ ಎಲ್ಲ ಪಿಂಚಣಿದಾರರನ್ನು ತೂಗು ಸೇತುವೆಗಳ ಮೇಲೆ ಪರೀಕ್ಷಿಸಲಿದ್ದಾರೆ.
ಪಿಂಚಣಿಗಾಗಿ ಭಾರತೀಯ ಬ್ಯಾಂಕುಗಳನ್ನು ಅವಲಂಬಿಸಿರುವ ಸಾವಿರಾರು ನೇಪಾಳಿ ಪಿಂಚಣಿದಾರರು ನೇಪಾಳದಲ್ಲಿದ್ದಾರೆ. ಕೊರೊನಾ ಅವಧಿಯಲ್ಲಿ ಉಭಯ ದೇಶಗಳ ನಡುವೆ ತೂಗು ಸೇತುವೆ ಮುಚ್ಚಿದ್ದರಿಂದ ಈ ಪಿಂಚಣಿದಾರರು ಹಣಕಾಸಿನ ಅಡಚಣೆ ಎದುರಿಸುತ್ತಿದ್ದರು. ಹೀಗಾಗಿ ನೇಪಾಳಿ ಪಿಂಚಣಿದಾರರ ಕೋರಿಕೆಯ ಮೇರೆಗೆ ಭಾರತ ಮತ್ತು ನೇಪಾಳದ ಆಡಳಿತವು ಸೇತುವೆಗಳನ್ನು ತೆರೆಯಲು ಅನುಮತಿ ನೀಡಿದೆ.