ಹೈದರಾಬಾದ್: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಅಧಿಕವಾಗುತ್ತಿರುವ ಸಂದರ್ಭದಲ್ಲಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ತೆಲಂಗಾಣದ ಕಾರಾಗೃಹಗಳ ಕೈದಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತದ್ದಾರೆ.
ವೈದ್ಯರು, ಪೊಲೀಸರು, ಆರೋಗ್ಯ ಕಾರ್ಯಕರ್ತರು ಮತ್ತು ಇತರರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನು ತಯಾರಿಸುತ್ತಿದ್ದಾರೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ, ರಾಜ್ಯದ ಕೇಂದ್ರ ಕಾರಾಗೃಹಗಳು ಮತ್ತು ಜಿಲ್ಲಾ ಜೈಲುಗಳು ಈ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಿವೆ.
ಈ ಮಾಸ್ಕ್ಗಳನ್ನು ತೊಳೆದು ಮರುಬಳಕೆ ಮಾಡಬಹುದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳಿಂದ ಕಡಿಮೆ ಬೆಲೆಗೆ ಇದು ಲಭ್ಯವಾಗಲಿದೆ.
ಮೈ ನೇಷನ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಇವುಗಳನ್ನು ಮಾರಾಟ ಮಾಡಲಾಗುತ್ತಿದೆ. ಹೈಜೀನ್ ಕಿಟ್ಗಳನ್ನು ಕೂಡಾ ತಯಾರಿಸಲಾಗುತ್ತಿದ್ದು, ತೊಳೆದು ಮರುಬಳಕೆ ಮಾಡಬಹುದಾದ ಮುಖವಾಡಗಳು, ಹ್ಯಾಂಡ್ ಸ್ಯಾನಿಟೈಸರ್ಗಳು, ಹ್ಯಾಂಡ್ ವಾಶ್, ಸಾಬೂನು ಮತ್ತು ಫಿನೈಲ್ ಈ ಕಿಟ್ನಲ್ಲಿದೆ.
ಕೈದಿಗಳಿಗೆ ರಸಾಯನಶಾಸ್ತ್ರಜ್ಞರು ಸ್ಯಾನಿಟೈಸರ್ ತಯಾರಿಸುವ ಬಗ್ಗೆ ತರಬೇತಿ ನೀಡಿದರೆ, ಟೈಲರ್‌ಗಳು ಮುಖವಾಡಗಳನ್ನು ಹೊಲಿಯುವ ಕುರಿತು ತರಬೇತಿ ನೀಡಿದ್ದಾರೆ.
ಕೈದಿಗಳು ಸಿದ್ಧಪಡಿಸಿದ ಉತ್ಪನ್ನಗಳನ್ನು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್, ವಿದ್ಯುತ್ ಮತ್ತು ಅಂಚೆ ಸಿಬ್ಬಂದಿ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಪೂರೈಸಲಾಗುತ್ತದೆ.