ನವದೆಹಲಿ: ಮಗಳನ್ನು ಹತ್ಯೆ ಮಾಡಿ ಪ್ರಕರಣದಲ್ಲಿ ಜೈಲು ಸೇರಿರುವ ಇಂದ್ರಾಣಿ ಮುಖರ್ಜಿ, ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಶರಣಾಗುವ ಬಗೆಗಿನ ಮನವಿಯನ್ನು ದೆಹಲಿ ಕೋರ್ಟ್ ಪುರಸ್ಕರಿಸಿದೆ.
ಮಾಜಿ ಹಣಕಾಸು ಸಚಿವ ಪಿ .ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಈ ಭ್ರಷ್ಟಾಚಾರ ಪ್ರಕರಣದ ಪ್ರಮಖ ಆರೋಪಿಗಳಾಗಿದ್ದಾರೆ. ಇನ್ನು, ಮಗಳು ಶೀನಾ ಬೋರಾಳನ್ನು ಹತ್ಯೆಗೈದ ಕೇಸ್ನಲ್ಲಿ ಇಂದ್ರಾಣಿ ಜೈಲು ಸೇರಿದ್ದು, ಭ್ರಷ್ಟಾಚಾರ ಪ್ರಕರಣದಲ್ಲಿಯೂ ಶರಣಾಗುತ್ತೇನೆ ಎಂದು ಮನವಿ ಸಲ್ಲಿಸಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ನಿಗದಿ ಮಾಡಿದೆ.
ಚಿದಂಬರಂ ಹಣಕಾಸು ಸಚಿವರಾಗಿದ್ದ ಸಮಯದಲ್ಲಿ, ಪುತ್ರ ಕಾರ್ತಿ ಚಿದಂಬರಂ ಐಎನ್ಎಕ್ಸ್ ಮೀಡಿಯಾಗಾಗಿ ವಿದೇಶಿ ಬಂಡವಾಳ ಪ್ರವರ್ಧನ ಮಂಡಳಿಯಿಂದ 305 ಕೋಟಿ ರೂಗಳ ನಿಧಿಗೆ ಅನುಮೋದನೆ ಪಡೆದಿದ್ದರ ಸಂಬಂಧ ಸಿಬಿಐ ಹಾಗೂ ಇಡಿ ತನಿಖೆ ನಡೆಸುತ್ತಿದೆ.
ಈಗಾಗಲೆ ತಂದೆ, ಮಗ ಇಬ್ಬರೂ ಈ ಬಗ್ಗೆ ವಿಚಾರಣೆ ಎದುರಿಸಿದ್ದಾರೆ. ಐಎನ್ಎಕ್ಸ್ ಮೀಡಿಯಾದ ಮಾಲೀಕರು ಇಂದ್ರಾಣಿ ಮುಖರ್ಜಿ ಹಾಗೂ ಪೀಟರ್ ಆಗಿದ್ದರು. ಈಗಾಗಲೇ ಈ ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಕಾರ್ತಿ ಚಿದಂಬರಂ ಅವರನ್ನು ಬಂಧಿಸಿ, 54 ಕೋಟಿ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾಮೀನಿನ ಮೇಲೆ ಅವರು ಹೊರಬಂದಿದ್ದಾರೆ.