ನವದೆಹಲಿ: 2048ರಲ್ಲಿ ಭಾರತದ ಜನಸಂಖ್ಯೆ ಸುಮಾರು 1.6 ಶತಕೋಟಿಗೆ ಏರಿಕೆಯಾಗಬಹುದು ಮತ್ತು 2100ರಲ್ಲಿ ಶೇಕಡಾ 32ರಷ್ಟು ಇಳಿಕೆಯಾಗಿ 1.09 ಶತಕೋಟಿಗೆ ಇಳಿಯಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಆದರೂ 2100ರ ವೇಳೆಗೆ ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಲಿದೆ ಎಂದು ಯುಎಸ್ನ ವಾಷಿಂಗ್ಟನ್ ವಿಶ್ವವಿದ್ಯಾನಿಲಯ ಸೇರಿದಂತೆ ಇತರ ಸಂಶೋಧಕರು ಹೇಳಿದ್ದಾರೆ.
ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಈ ವಿಶ್ಲೇಷಣೆಯು ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ 2017ರ ಡೇಟಾ ಬಳಸಿದ್ದು, ಭಾರತ, ಅಮೆರಿಕ, ಚೀನಾ ಮತ್ತು ಜಪಾನ್ ಸೇರಿದಂತೆ 183 ದೇಶಗಳ ಅಧ್ಯಯನ ನಡೆಸಿದೆ.
ಜನನ, ಮರಣ ಹಾಗೂ ವಲಸೆ ಪ್ರಮಾಣವನ್ನು ಅಂದಾಜಿಸಿ ಸಂಶೋಧಕರು ಈ ವರದಿ ತಯಾರಿಸಿದ್ದಾರೆ.
ಭಾರತ ಮತ್ತು ಚೀನಾದಂತಹ ದೇಶಗಳಲ್ಲಿ ಕೆಲಸ ಮಾಡುವ ವಯಸ್ಸಿನ ಜನಸಂಖ್ಯೆಯಲ್ಲಿ ಕುಸಿತ ಕಂಡುಬರಬಹುದು. ಇದು ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಬಹುದು ಮತ್ತು ಜಾಗತಿಕ ಶಕ್ತಿಗಳ ಬದಲಾವಣೆಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.
ಈ ಶತಮಾನದ ಕೊನೆಯಲ್ಲಿ ಭಾರತ, ಚೀನಾ ಮತ್ತು ಅಮೆರಿಕ ಪ್ರಬಲ ಶಕ್ತಿಗಳೊಂದಿಗೆ ಜಗತ್ತಿನ ಕೇಂದ್ರವಾಗಬಹುದು ಎಂದು ಅವರು ಹೇಳಿದರು.
ಭಾರತದಲ್ಲಿ ದುಡಿಯುವ ವಯಸ್ಕರ ಸಂಖ್ಯೆ ಕುಸಿಯಲಿದೆ ಎಂದು ಅಧ್ಯಯನಗಳು ತಿಳಿಸಿವೆ. 2017ರಲ್ಲಿ 762 ದಶಲಕ್ಷ ಇದ್ದ ದುಡಿಯುವ ವಯಸ್ಕರ ಸಂಖ್ಯೆ 2100ರಲ್ಲಿ ಸುಮಾರು 578 ದಶಲಕ್ಷಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.
ಚೀನಾದಲ್ಲಿ 2017ರಲ್ಲಿ ಕಾರ್ಮಿಕರ ಸಂಖ್ಯೆ 950 ದಶಲಕ್ಷ ಇದ್ದು, 2100ರಲ್ಲಿ 357ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ.
ಶತಮಾನದಲ್ಲಿ ತನ್ನ ದುಡಿಯುವ ವಯಸ್ಸಿನ ಜನಸಂಖ್ಯೆಯನ್ನು ರಕ್ಷಿಸುವ ಏಷ್ಯಾದ ಪ್ರಮುಖ ಶಕ್ತಿಯಲ್ಲಿ ಭಾರತವು ಒಂದಾಗಬಹುದು ಎಂದು ಅಧ್ಯಯನ ಹೇಳಿದೆ.
"ಭಾರತದ ಜಿಡಿಪಿ ಶ್ರೇಯಾಂಕ 7ರಿಂದ 3ನೇ ಸ್ಥಾನಕ್ಕೆ ಏರಲಿದೆ" ಎಂದು ವಿಜ್ಞಾನಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.