ನವದೆಹಲಿ : ಲಾಕ್ಡೌನ್ ಸಡಿಲಿಕೆ ಬಳಿಕ ಕಾರ್ಖಾನೆಗಳು ಪುನಾರಂಭವಾಗಿವೆ. ಉತ್ಪನ್ನಗಳ ರಫ್ತು ಮತ್ತು ಖರೀದಿಯು ನಿಧಾನವಾಗಿ ಹೆಚ್ಚಳವಾಗುತ್ತಿವೆ. ಈ ಮಧ್ಯೆ ನವೆಂಬರ್ನಲ್ಲಿ ಉತ್ಪಾದನಾ ವಲಯದ ವೇಗ ಕುಂಠಿತಗೊಂಡಿದೆ ಎಂದು ಮಾಸಿಕ ಸಮೀಕ್ಷೆಯಿಂದ ತಿಳಿದು ಬಂದಿದೆ.
ಐಹೆಚ್‌ಎಸ್ ಮಾರ್ಕಿಟ್ ಇಂಡಿಯಾ ವರದಿ ಪ್ರಕಾರ ಪಿಎಂಐ (ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ) ಅಕ್ಟೋಬರ್ನಲ್ಲಿ 58.9 ರಷ್ಟಿತ್ತು. ಆದರೆ, ನವೆಂಬರ್ನಲ್ಲಿ 56.3 ಕ್ಕೆ ಇಳಿದಿದೆ. ಆದರೂ ಉತ್ಪಾದನಾ ಕ್ಷೇತ್ರ ಬೆಳವಣಿಗೆಯಾಗುತ್ತಿದೆ ಎನ್ನಲಾಗ್ತಿದೆ.
ದೇಶದ ಉತ್ಪಾದನಾ ವಲಯವು ಚೇತರಿಕೆಯ ಹಾದಿಯಲ್ಲಿದೆ. ಹೊಸ ಆದೇಶಗಳನ್ನು ಅಳವಡಿಸಿಕೊಂಡು ಸರಕುಗಳ ಉತ್ಪಾದನೆ ಹೆಚ್ಚಿಸಲಾಗಿದೆ ಎಂದು ಐಹೆಚ್‌ಎಸ್ ಮಾರ್ಕಿಟ್ನ ಅರ್ಥಶಾಸ್ತ್ರ ಸಹಾಯಕ ನಿರ್ದೇಶಕ ಪೊಲ್ಯಣ್ಣ ಡಿ ಲಿಮಾ ತಿಳಿಸಿದ್ದಾರೆ.
ಕೋವಿಡ್ ಹೊಡೆತದಿಂದ ಈಗ ತಾನೆ ಚೇತರಿಸಿಕೊಳ್ಳುತ್ತಿರುವ ಉತ್ಪಾದನಾ ವಲಯ, ಬೇಡಿಕೆ ಹೆಚ್ಚಾದರೆ ಮಾತ್ರ ಉತ್ಪನ್ನಗಳ ತಯಾರಿ ಹೆಚ್ಚಾಗುತ್ತದೆ ಎಂದು ಕಂಪನಿಗಳು ಅಭಿಪ್ರಾಯ ಪಟ್ಟಿವೆ.
ಕೊರೊನಾ ವೈರಸ್ ವ್ಯವಹಾರದ ಮೇಲೆ ಭಾರಿ ಪರಿಣಾಮ ಬೀರಿದ್ದು, ಉತ್ಪಾದನಾ ವಲಯಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದು ಲಿಮಾ ತಿಳಿಸಿದ್ದಾರೆ. ಅಕ್ಟೋಬರ್ನಲ್ಲಿ ಉತ್ಪಾದನಾ ವಲಯದಲ್ಲಿದ್ದ ಆಶಾವಾದವು ನವೆಂಬರ್ನಲ್ಲಿ ಸ್ವಲ್ಪ ಕಡಿಮೆಯಾಯಿತು ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಕಂಪನಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಉದ್ಯಮವನ್ನು ಪ್ರಾರಂಭಿಸಿವೆ. ಹಾಗಾಗಿ ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗಿದ್ದು, ಉತ್ಪಾದನೆ ಕೂಡ ಕಡಿಮೆಯಾಗಿದೆ. ಸೆಪ್ಟೆಂಬರ್ನಲ್ಲಿ ಲಾಕ್ಡೌನ್ ಹಿಂಪಡೆದಿದ್ದರಿಂದ ಉದ್ಯಮಗಳು ಪ್ರಾರಂಭಗೊಂಡು ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಂಡು, ಜಿಡಿಪಿ ಹೆಚ್ಚಳಕ್ಕೆ ಕಾರಣವಾಯಿತು.