ಕೊರೊನಾ ವೈರಸ್ ಹರಡುವಿಕೆ ಮತ್ತು ತೈಲ ಬೆಲೆಗಳ ಏರಿಕೆಯಿಂದಾಗಿ ವಲಸೆ ಜನಸಂಖ್ಯೆಯನ್ನು ಕಡಿಮೆ ಮಾಡಲು ಅರಬ್ ದೇಶದಲ್ಲಿ ಕರಡು ವಿಧೇಯಕ ಅಂಗೀಕರಿಸಿದ ಕಾರಣ ಕುವೈತ್‌ನಲ್ಲಿ ಒಂದು ದೊಡ್ಡ ಬಿಕ್ಕಟ್ಟು ಎದುರಾದಂತಾಗಿದೆ. ಈ ಮಸೂದೆಯ ಪ್ರಕಾರ ಭಾರತೀಯರ ಜನಸಂಖ್ಯೆ ಶೇ.15 ಕ್ಕಿಂತ ಹೆಚ್ಚಿರಬಾರದು. ಈ ಕರಡು ವಿಧೇಯಕ ಜಾರಿಗೆ ಬಂದಿದ್ದೇ ಹೌದಾದರೆ, ಅನೇಕ ವಲಸೆ ಭಾರತೀಯರು ತಮ್ಮ ಮನೆಯ ಹಾದಿ ಹಿಡಿಯುವುದು ಅನಿವಾರ್ಯವಾಗುತ್ತದೆ.
ಕುವೈತ್‌ನಲ್ಲಿನ ಒಟ್ಟು ಜನಸಂಖ್ಯೆ 4.3 ಮಿಲಿಯನ್, ಆದರೆ ಇದರಲ್ಲಿ 3 ಮಿಲಿಯನ್ನಷ್ಟು ಜನ ಸಾಗರೋತ್ತರ ದೇಶಗಳಿಂದ ಬಂದವರಾಗಿದ್ದಾರೆ. ಭಾರತೀಯ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ, ವಿದೇಶದಲ್ಲಿ ಅಂದಾಜು 13.62 ಮಿಲಿಯನ್ ಭಾರತೀಯರು ಇದ್ದಾರೆ ಎಂದು ತಿಳಿದುಬಂದಿದೆ.
ಮಧ್ಯ ಪ್ರಾಚೀನ(ಗಲ್ಫ್) ರಾಷ್ಟ್ರಗಳಲ್ಲಿನ ಭಾರತೀಯರ ಸಂಖ್ಯೆ (05.02.2020 ರ ಪ್ರಕಾರ):
- ಬಹ್ರೇನ್- 3,23,292 -3.63%
- ಕುವೈತ್- 1,02,9861-11.56%
- ಓಮನ್- 7,79,351-8.75%
- ಕತಾರ್- 7,56,062-8.49%
- ಸೌದಿ ಅರೇಬಿಯಾ- 25,94,947-29.14%
- ಯುನೈಟೆಡ್ ಅರಬ್ ಎಮಿರೇಟ್ಸ್- 34,20,000- 38.14%
- ಅರಬ್ ರಾಷ್ಟ್ರಗಳಲ್ಲಿನ ಒಟ್ಟು ಭಾರತೀಯರು- 89,03,513
ಭಾರತೀಯರು ಈ ರಾಷ್ಟ್ರಗಳಿಗೆ ವಲಸೆ ಹೋಗಲು ಕಾರಣವೇನು?:
1970ರ ತೈಲ ಏರಿಕೆಯ ನಂತರ ಭಾರತೀಯ ಕಾರ್ಮಿಕರು ಮಧ್ಯ ಪ್ರಾಚೀನ ಅಂದರೆ ಗಲ್ಫ್ ದೇಶಗಳಿಗೆ ವಲಸೆ ಹೋಗುವುದು ಹೆಚ್ಚಾಯಿತು. ನಂತರದ ದಶಕಗಳಲ್ಲಿ ಅರಬ್ ದೇಶಗಳ ಆರ್ಥಿಕತೆಗಳು ವಿಸ್ತರಣೆಗೊಂಡವು. ಸಣ್ಣ ಸ್ಥಳೀಯ ಉದ್ಯೋಗಿಗಳಿಂದ ಹಿಡಿದು ದೊಡ್ಡ ದೊಡ್ಡ ಉದ್ಯೋಗಗಳಿಗೂ ಈ ದೇಶಗಳು ವಿದೇಶಿ ಕಾರ್ಮಿಕರನ್ನು ಆಹ್ವಾನಿಸುವ ಹಾಗೂ ತಮ್ಮತ್ತ ಗಮನ ಸೆಳೆಯುವ ನೀತಿಯನ್ನು ಪ್ರಾರಂಭಿಸಿದವು.
ಕಡಿಮೆ ನುರಿತ ಉದ್ಯೋಗಿಳನ್ನೂ ಸಹ ಸ್ವೀಕರಿಸಲು ಈ ದೇಶಗಳು ಆ ಕಾಲದಲ್ಲಿ ತಯಾರಿ ನಡೆಸಿದ್ದರಿಂದ, ದಕ್ಷಿಣ ಏಷ್ಯಾದ ಕಾರ್ಮಿಕರು ಸಹ ಅತೀ ಹೆಚ್ಚಿನ ಗಳಿಕೆ ಹಾಗೂ ಉಳಿತಾಯ ಅಲ್ಲಿ ಸಾಧ್ಯ ಎಂಬ ಧ್ಯೇಯದೊಂದಿಗೆ ಅರಬ್ ರಾಷ್ಟ್ರಗಳಿಗೆ ತೆರಳಲು ನಿರ್ಧರಿಸಿದ್ದರು. ಭಾರತ ಮತ್ತು ಇತರ ದಕ್ಷಿಣ ಏಷ್ಯಾದ ದೇಶಗಳಿಂದ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮಧ್ಯ ಪ್ರಾಚೀನ ದೇಶಗಳು ಸಹ ಆಸಕ್ತಿ ಹೊಂದಿದ್ದವು.
ಸುಮಾರು ಶೇ.70 ರಷ್ಟು ಭಾರತೀಯರು, ಈ ದೇಶಗಳಲ್ಲಿ ಕಾರ್ಮಿಕರು ಅಥವಾ ತಂತ್ರಜ್ಞರಾಗಿ, ಗೃಹ ಸೇವಕರು ಮತ್ತು ಚಾಲಕರಾಗಿ ಅಂದಿನಿಂದ ಇಂದಿನವರೆಗೂ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದಾಗ್ಯೂ, ಕಳೆದ ಒಂದು ದಶಕದಲ್ಲಿ ನುರಿತ ಕೆಲಸಗಾರರು, ಕೇವಲ ಸಣ್ಣ ಕಾರ್ಮಿಕರಾಗಿ ಕೆಲಸ ಮಾಡುವುದು ಮಾತ್ರವಲ್ಲದೆ ತಂತ್ರಜ್ಞನಾದ ಬಗ್ಗೆ ನುರಿತ ಉದ್ಯೋಗಾಕಾಂಕ್ಷಿಗಳು ಸಹ ತಮ್ಮನ್ನು ವಲಸೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು. ಇದಾದ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ದೇಶ ಬಿಟ್ಟು ಇತರ ಅರಬ್ ದೇಶಗಳಿಗೆ ತೆರಳಿ ಕೆಲಸ ನಿರ್ವಹಿಸಿದ ಪರಿಣಾಮ ಇದೀಗ, ಗಲ್ಫ್ ದೇಶಗಳಲ್ಲಿ ವಲಸಿಗರ ಸಂಖ್ಯೆಯೇ ಅಧಿಕವಾಗತೊಡಗಿದೆ.
ಅರಬ್ ರಾಷ್ಟ್ರಗಳಲ್ಲಿ ಭಾರತೀಯ ವಲಸಿಗರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳು:
ಅಧಿಕ ಸಂಪಾದನೆ, ಹಣದ ಉಳಿತಾಯ ಮಾಡಬಹುದು ಎಂಬ ಧ್ಯೇಯವನ್ನಿಟ್ಟುಕೊಂಡು ಭಾರತ ಬಿಟ್ಟು ಅರಬ್ ದೇಶಗಳಿಗೆ ತೆರಳಿದ ಜನರಿಗೆ ಅಲ್ಲಿ ಸುಖದ ಸುಪ್ಪತ್ತಿಗೆ ಇರಲಿದೆ ಎಂಬ ಭಾವನೆ ಅದೆಷ್ಟೋ ಜನರಲ್ಲಿದೆ. ಆದರೆ ನಮ್ಮ ದೇಶದಿಂದ ಅರಬ್ ದೇಶಕ್ಕೆ ಪ್ರಯಾಣ ಬೆಳೆಸಿದವರು ಎದಿರುಸುತ್ತಿರುವ ಸಮಸ್ಯೆಗಳು ಸಾಕಷ್ಟಿವೆ.
- ಸರಿಯಾದ ಸಮಯಕ್ಕೆ ಸಂಬಳ ಪಾವತಿಸದಿರುವುದು
- ಕಾನೂನುಬದ್ಧ ಕಾರ್ಮಿಕ ಹಕ್ಕುಗಳು ಮತ್ತು ಸವಲತ್ತುಗಳ ನಿರಾಕರಣೆ
- ನಿವಾಸ ಪರವಾನಗಿಗಳನ್ನು ನೀಡದಿರುವುದು
- ಅಧಿಕಾರಾವಧಿ ಭತ್ಯೆಯ ಅನುದಾನಗಳನ್ನು ಪಾವತಿಸದಿರುವುದು
- ಸಾಪ್ತಾಹಿಕ ರಜಾ ದಿನಗಳನ್ನು ನೀಡದಿರುವುದು
- ಅತಿಯಾದ ಕೆಲಸದ ಒತ್ತಡ ಹಾಗೂ ದೀರ್ಘವಾದ ಕೆಲಸದ ಸಮಯ
- ಭಾರತಕ್ಕೆ ಭೇಟಿ ನೀಡಲು ಅಥವಾ ಹಿಂದಿರುಗಲು ಪರವಾನಗಿ ನೀಡಲು ನಿರಾಕರಿಸುವುದು
- ಕಂಪನಿಯ ಒಪ್ಪಂದಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ವೈದ್ಯಕೀಯ ಹಾಗೂ ವಿಮಾ ಸೌಲಭ್ಯಗಳನ್ನು ಒದಗಿಸದ ನಂತರ ಅಂತಿಮ ನಿರ್ಗಮನಕ್ಕೆ ವೀಸಾ ನಿರಾಕರಿಸುವುದು.
- ಬಂಧನಕ್ಕೊಳಗಾದ ಘಟನೆಗಳು ಸಹ ವರದಿಯಾಗಿವೆ.
ಮಧ್ಯ ಪ್ರಾಚೀನ ರಾಷ್ಟ್ರಗಳಲ್ಲಿ ಸಾವನ್ನಪ್ಪಿದ ವಲಸೆ ಕಾರ್ಮಿಕರ ಸಂಖ್ಯೆ (2014 ರಿಂದ 2019 ರವರೆಗೆ ):
- ಬಹ್ರೇನ್- 1235 ಕಾರ್ಮಿಕರು
- ಕುವೈತ್- 3580 ಕಾರ್ಮಿಕರು
- ಓಮನ್- 3009 ಕಾರ್ಮಿಕರು
- ಕತಾರ್- 1611 ಕಾರ್ಮಿಕರು
- ಸೌದಿ ಅರೇಬಿಯಾ- 15,022 ಕಾರ್ಮಿಕರು
- ಯುಎಇ- 9,473 ಕಾರ್ಮಿಕರು
ವಿವಿಧ ಕಾರಣಗಳಿಂದಾಗಿ ಭಾರತೀಯ ಕಾರ್ಮಿಕರು ನೀಡಿದ ದೂರುಗಳ ಸಂಖ್ಯೆ (2014 -2019 ನವೆಂಬರ್ 13 ರವರೆಗೆ):
- ಬಹ್ರೇನ್- 4458 ದೂರುಗಳು
- ಕತಾರ್- 19,013 ದೂರುಗಳು
- ಸೌದಿ ಅರೇಬಿಯಾ- 36,570 ದೂರುಗಳು
- ಓಮನ್- 14,746 ದೂರುಗಳು
- ಕುವೈತ್- 21,977 ದೂರುಗಳು
- ಯುಎಇ- 14,424 ದೂರುಗಳು
ಅರಬ್ ರಾಷ್ಟ್ರಗಳಿಂದ ರವಾನೆಯಾದ ಹಣ (ವಿಶ್ವ ಬ್ಯಾಂಕ್ ವರದಿ 2018 ರ ಪ್ರಕಾರ):
- ಯುಎಇ- 13,823 ಮಿಲಿಯನ್ ಡಾಲರ್
- ಸೌದಿ ಅರೇಬಿಯಾ- 11,239 ಮಿಲಿಯನ್ ಡಾಲರ್
- ಕುವೈತ್- 4,587 ಮಿಲಿಯನ್ ಡಾಲರ್
- ಕತಾರ್- 4,143 ಮಿಲಿಯನ್ ಡಾಲರ್
- ಒಮಾನ್- 3,250 ಮಿಲಿಯನ್ ಡಾಲರ್
ಕೊರೊನಾ ವೈರಸ್ನಿಂದಾಗಿ ಭಾರತೀಯ ವಲಸೆ ಕಾರ್ಮಿಕರ ಮೇಲಾದ ಪರಿಣಾಮ:
ಪರ್ಷಿಯನ್ ಕೊಲ್ಲಿ ಪ್ರದೇಶದ ಹೆಚ್ಚಿನ ಸಂಖ್ಯೆಯ ಭಾರತೀಯರು ಉತ್ಪಾದನಾ ಕ್ಷೇತ್ರ, ರೆಸ್ಟೋರೆಂಟ್, ಚಾಲಕ, ಸಣ್ಣ ಉದ್ಯಮಗಳು, ಸೇವಾ ಕ್ಷೇತ್ರಗಳು ಮತ್ತು ದೇಶೀಯ ಸೇವೆಗಳಲ್ಲಿ ಕಡಿಮೆ ದರ್ಜೆಯ ಉದ್ಯೋಗದಲ್ಲಿದ್ದಾರೆ.
ಅವರಲ್ಲಿ ಹೆಚ್ಚಿನವರು ತಮ್ಮ ಜೀವನವನ್ನು ನಡೆಸಲು ಪ್ರತಿನಿತ್ಯ ಕಠಿಣ ಪರಿಶ್ರಮ ಪಡುವುದು ಅನಿವಾರ್ಯ. ಈ ದೈನಂದಿನ ಕೂಲಿ ಕಾರ್ಮಿಕರಿಗೆ ಉಚಿತ ವಸತಿ ಅಥವಾ ಅವರ ವಸತಿ ಮತ್ತು ಆಹಾರಕ್ಕಾಗಿ ಭತ್ಯೆಗಳನ್ನು ನೀಡಲಾಗುತ್ತದೆ. ಇದಲ್ಲದೆ, ಈ ಕಾರ್ಮಿಕರು ತಮ್ಮ ಕೆಲಸದಲ್ಲಿ ಹೆಚ್ಚಿನ ಸಮಯ(ಓಟಿ) ದುಡಿಯುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಇವೆಲ್ಲವುದಕ್ಕೂ ಅರಬ್ ದೇಶಗಳಲ್ಲಿ ಅವಕಾಶವಿದೆ.
ಭಾರತದಲ್ಲಿ ಮಾತ್ರವಲ್ಲದೆ ಅರಬ್ ದೇಶಗಳಲ್ಲಿಯೂ ಸಹ ಲಾಕ್‌ಡೌನ್‌ನಿಂದಾಗಿ ಯಾವುದೇ ಆದಾಯವಿಲ್ಲದೆ ಅಲ್ಲಿನ ವಲಸೆ ಉದ್ಯೋಗಿಗಳು ಸಂಕಷ್ಟ ಎದಿರುಸುವಂತಾಗಿದೆ. ಇದು ಕೇವಲ ವಲಸೆ ಬಂದವರ ಮೇಲೆ ಮಾತ್ರವಲ್ಲದೆ ಇವರು ಕಳುಹಿಸುವ ಹಣವನ್ನೇ ಅವಲಂಬಿಸಿರುವ ಭಾರತದಲ್ಲಿರುವ ಅವರ ಲಕ್ಷಾಂತರ ಕುಟುಂಬ ಸದಸ್ಯರ ಮೇಲೂ ಆರ್ಥಿಕ ಪರಿಣಾಮ ಬೀರಿದೆ.
ಕೊರೊನಾ ವೈರಸ್ನಿಂದಾಗಿ ವಲಸೆ ಹೋಗಿ ವಿದೇಶಗಳಲ್ಲಿ ಅದರಲ್ಲಿಯೂ ಅರಬ್ ದೇಶಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಯಾರೂ ಸಹ ಕೇಳುವವರಿಲ್ಲ. ಭಾರತದಿಂದ ಹೊಟ್ಟೆಪಾಡಿಗಾಗಿ ಅಲ್ಲಿ ತೆರಳಿದರೆ ಅಲ್ಲಿ ದೊರೆಯುವುದು ಸಾಮಾನ್ಯ ವಸತಿ ನಿಲಯಗಳು ಮತ್ತು ಒಂದೇ ಅಪಾರ್ಟ್‌ಮೆಂಟ್‌ಗಳಲ್ಲಿ ಸಾಕಷ್ಟು ಜನ ಇರುವ ವ್ಯವಸ್ಥೆ. ಇಲ್ಲಿ ಸಾಮಾಜಿಕ ಅಂತರ ಎಂಬುದು ದೂರದ ಮಾತು.
ಕೆಳಗಿನ ದರ್ಜೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅರಬ್ ದೇಶಗಳಲ್ಲಿ ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವಿಮೆಯಂತಹ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಇವರುಕೊಠಡಿಗಳು ಹೇಗಿರುತ್ತವೆ ಅಂದರೆ, ಒಂದು ಸಣ್ಣ ರೂಮಿನಲ್ಲಿ ನಾಲ್ಕರಿಂದ ಐದು ಜನ ವಾಸವಾಗಿರಬೇಕಾಗುತ್ತದೆ. ಒಂದು ವೇಳೆ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದರೆ ಇನ್ನುಳಿದ ಜನರಿಗೆ ಶೀಘ್ರದಲ್ಲೇ ಈ ಸೋಂಕು ತಗುಲುವುದರಲ್ಲಿ ಯಾವುದೇ ಅನುಮಾನವಿಲ್ಲ.