ದೆಹಲಿ: ಭಾರತೀಯ ನೌಕಾಪಡೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಇದೀಗ 18 ಸಾಂಪ್ರದಾಯಿಕ ಮತ್ತು 6 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸಲು ಯೋಚಿಸಿದ್ದು, ನೌಕಾಪಡೆಗೆ ಹೆಚ್ಚಿನ ಬಲ ಬಂದತಾಗಿದೆ.
18 ಸಾಂಪ್ರದಾಯಿಕ ನೌಕೆಗಳ ಜೊತೆಗೆ 5 ಎಸ್ ಎಸ್ ಎನ್ (nuclear powered attack) ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಯೋಜಿಸಲಾಗಿದೆ. ಆದರೆ ಈಗ ಅಸ್ತಿತ್ವದಲ್ಲಿರುವ ಒಂದು ಎಸ್ ಎಸ್ ಎನ್ ಗುತ್ತಿಗೆಗೆ ಲಭ್ಯವಿದೆ ಎಂದು ರಕ್ಷಣಾ ಸ್ಥಾಯಿ ಸಮಿತಿ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತನ್ನ ವರದಿಯನ್ನು ಮಂಡಿಸಿದೆ.
ಅರಿಹಂತ್ ಕ್ಲಾಸ್ ಎಸ್.ಎಸ್.ಬಿ.ಎನ್ (ಸ್ಟ್ರಾಟಜಿಕ್ ಸ್ಟ್ರೈಕ್ ನ್ಯೂಕ್ಲಿಯರ್ ಸಬ್‌ಮೆರಿನ್) ಜೊತೆಗೆ ಪರಮಾಣು ಕ್ಷಿಪಣಿಗಳನ್ನು ಅಳವಡಿಸಿದ 6 ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಭಾರತೀಯ ನೌಕಾಪಡೆ ನಿರ್ಮಿಸಲು ಯೋಜನೆ ರೂಪಿಸಿದೆ. ಪರಮಾಣು ದಾಳಿ ಜಲಾಂತರ್ಗಾಮಿ ನೌಕೆಗಳನ್ನು ಖಾಸಗಿ ವಲಯದ ಕೈಗಾರಿಕೆಗಳ ಸಹಭಾಗಿತ್ವದಲ್ಲಿ ಸ್ಥಳೀಯವಾಗಿ ನಿರ್ಮಿಸಲು ಯೋಜಿಸಲಾಗಿದೆ.
ಪ್ರಸ್ತುತ, ನೌಕಾಪಡೆಯು ರಷ್ಯಾದ ಮೂಲದ ಕಿಲೋ ಕ್ಲಾಸ್, ಜರ್ಮನ್ ಮೂಲದ ಎಚ್ ಡಿ ಡಬ್ಲ್ಯೂ ವರ್ಗ ಮತ್ತು ಇತ್ತೀಚಿನ ಫ್ರೆಂಚ್ ಸ್ಕಾರ್ಪೀನ್-ಕ್ಲಾಸ್ ಜಲಾಂತರ್ಗಾಮಿ ನೌಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಾಗೂ ರಷ್ಯಾದಿಂದ ಒಂದು ಐಎನ್‌ಎಸ್ ಚಕ್ರ (Akula class) ಗುತ್ತಿಗೆಗೆ ಪಡೆದಿದೆ.
ಕಳೆದ 15 ವರ್ಷಗಳಲ್ಲಿ ಸ್ಕಾರ್ಪೀನ್ ವರ್ಗದ ಹಡಗುಗಳಾದ ಐ ಎನ್ ಎಸ್ ಕಲ್ವಾರಿ ಮತ್ತು ಐ ಎನ್ ಎಸ್ ಖಂಡೇರಿ ಸೇರಿದಂತೆ ಎರಡು ಹೊಸ ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ಸಮಿತಿಗೆ ತಿಳಿಸಿದೆ.
ಇನ್ನು ಅಸ್ತಿತ್ವದಲ್ಲಿರುವ 13 ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳು 17 ರಿಂದ 31 ವರ್ಷ ವಯಸ್ಸಿನವು ಎಂದು ಸ್ಥಾಯಿ ಸಮಿತಿ ವರದಿ ತಿಳಿಸಿದೆ. ನೌಕಾಪಡೆಯು ತನ್ನ ಪ್ರಾಜೆಕ್ಟ್ 75 ಇಂಡಿಯಾ ಅಡಿಯಲ್ಲಿ ಆರು ಹೊಸ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ಯೋಜನೆಯ ಕೆಲಸ ಮಾಡುತ್ತಿದೆ. ಇದರಲ್ಲಿ ಭಾರತೀಯ ಕಂಪನಿಗಳು ಮತ್ತು ವಿದೇಶಿ ಮೂಲದವರ ಸಹಭಾಗಿತ್ವದಲ್ಲಿ ನೌಕಾಪಡೆಗಳನ್ನು ನಿರ್ಮಿಸಲಿದೆ.