ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಈಗಾಗಲೇ ಮುಖಭಂಗ ಅನುಭವಿಸಿರುವ ಪಾಕಿಸ್ತಾನ, ಗೂಢಚರ್ಯೆ ಆರೋಪದ ಮೇಲೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ.
ಪಂಜಾಬ್ ಪ್ರಾಂತ್ಯದಲ್ಲಿರುವ ಪಾಕಿಸ್ತಾನಿ ಪೊಲೀಸರು ಡೇರಾ ಘಾಜಿ ಖಾನ್ ಎಂಬಲ್ಲಿ ಭಾರತದ ಗೂಢಚಾರಿ ಎಂಬ ಕಾರಣಕ್ಕೆ ರಾಜು ಲಕ್ಷ್ಮಣ್ ಎಂಬಾತನನ್ನು ಬಂಧಿಸಿದ್ದಾರೆ. ಪಾಕಿಸ್ತಾನದಲ್ಲಿ ಗೂಢಚರ್ಯೆ ಮಾಡಿದರೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವಿದೆ.
ಲಾಹೋರ್ನಿಂದ 400 ಕಿ.ಮೀ. ದೂರದಲ್ಲಿರುವ ರಾಖಿ ಗಾಜ್ ಎಂಬಲ್ಲಿ ಬಂಧಿತ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಬಲೂಚಿಸ್ತಾನ ಪ್ರಾಂತ್ಯದೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಸದ್ಯ ರಾಜು ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದೇ ಸ್ಥಳದಲ್ಲಿಯೇ ಕುಲಭೂಷಣ್ ಜಾಧವ್ ಅವರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದರು. ಗೂಢಚರ್ಯೆ ಆರೋಪದ ಮೇಲೆ ಅವರಿಗೆ ಮರಣದಂಡನೆಯನ್ನೂ ವಿಧಿಸಲಾಗಿತ್ತು. ಆದರೆ ಭಾರತದ ಮನವಿಗೆ ಸ್ಪಂದಿಸಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕ್ನ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸೂಚಿಸಿದೆ. ಈ ಪ್ರಕ್ರಿಯೆ ಪರಿಣಾಮಕಾರಿಯಾಗಿ ಆಗುವವರೆಗೂ ಜಾಧವ್ಗೆ ಶಿಕ್ಷೆ ನೀಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.