ವಿಶಾಖಪಟ್ಟಣಂ: ಭಾರತ ಯಾವುದೇ ದೇಶದ ಮೇಲೆ ದಾಳಿ ನಡೆಸಲ್ಲ. ಒಂದುವೇಳೆ ಬೇರೆ ದೇಶಗಳು ಭಾರತದ ಮೇಲೆ ದಾಳಿಗೆ ಮುಂದಾದ್ರೆ ಭಾರತ ಸುಮ್ಮನಿರಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯದ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ಮೊದಲು ಯಾರ ಮೇಲೂ ದಾಳಿ ಮಾಡುವುದಿಲ್ಲ. ಆದರೆ, ಯಾರಾದರೂ ದಾಳಿ ಮಾಡಿದರೆ ಅವರು ಜೀವಿತಾವಧಿಯವರೆಗೆ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡುತ್ತದೆ ಎಂದಿದ್ದಾರೆ.
ಅಲ್ಲದೆ ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ಮಾತುಕತೆ ನಡೆಸುವುದನ್ನು ನಾಯ್ಡು ತಳ್ಳಿಹಾಕಿದ್ದಾರೆ. ಆದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ವಿಚಾರದ ಕುರಿತು ನಮ್ಮ ನೆರೆಹೊರೆಯವರೊಂದಿಗೆ ಮಾತುಕತೆ ನಡೆಸಬಹುದು ಎಂದಿದ್ದಾರೆ.