ನವದೆಹಲಿ: ಕೋವಿಡ್-19ನಿಂದ ವಿಧಿಸಲಾಗಿರುವ ಲಾಕ್‌ಡೌನ್ 5.0ನಲ್ಲಿ ಹಲವು ಸಡಿಲಿಕೆಗಳೊಂದಿಗೆ ಕೇಂದ್ರ ಸರ್ಕಾರ ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್ ಮತ್ತು ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಿದೆ. ಹೀಗಾಗಿ ಇದೇ 8ರಿಂದ ಭಕ್ತರ ದರ್ಶನಕ್ಕೆ ದೇವಸ್ಥಾನಗಳ ಬಾಗಿಲು ತೆರೆಯಲಾಗುತ್ತಿದೆ.
ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ದೇವಸ್ಥಾನಗಳಿಗೆ ಮುಂದಿನ ವಾರ ಭಕ್ತರ ದಂಡು ಹರಿದು ಬರಲಿದ್ದು, ಜನಸಂದಣಿ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಮೂರು ತಿಂಗಳಿಗೆ ಹೋಲಿಸಿದ್ರೆ ದೇಶಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಲೇ ಇದೆ. ಇದರ ನಡುವೆಯೂ ಜೀವ, ಜೀವನ ಎರಡೂ ಮುಖ್ಯವಾಗಿರುವುದರಿಂದ ಕೇಂದ್ರ ಸರ್ಕಾರ, ಬಹುತೇಕ ವಲಯಗಳಿಗೆ ವಿಧಿಸಿದ್ದ ನಿರ್ಬಂಧ ಸಡಿಲಿಕೆ ಮಾಡಿದೆ. ಇದರಿಂದ ಕೋಟ್ಯಂತರ ಮಂದಿ ಉದ್ಯೋಗಕ್ಕೆ ಮರಳಿದ್ದಾರೆ.
ದೇವಸ್ಥಾನದಲ್ಲಿ ಇವು ಇರುವುದಿಲ್ಲ
ದೇವಸ್ಥಾನಗಳಿಗೆ ಪ್ರವೇಶಿಸುವ ಮುನ್ನ ಭಕ್ತರು ಕೈ-ಕಾಲು ತೊಳೆಯಬೇಕು. ಯಾವುದೇ ಕಾರಣಕ್ಕೂ ಪ್ರಸಾದ ಮತ್ತು ತೀರ್ಥ ನೀಡುವುದಿಲ್ಲ. ದೇವರ ವಿಗ್ರಹ ಅಥವಾ ಪವಿತ್ರ ಪುಸ್ತಕಗಳನ್ನು ಮುಟ್ಟಲು ಅವಕಾಶ ಇರಲ್ಲ. ಕೊರೊನಾ ವೈರಸ್ ಹರಡುವ ಭೀತಿಯಿಂದ ರೆಕಾರ್ಡ್ ಭಕ್ತಿ ಗೀತೆ ಅಥವಾ ಸಂಗೀತ ಹಾಕಲಾಗುತ್ತದೆ. ಅರ್ಚಕರು ಗುಂಪಾಗಿ ಸೇರಿ ಮಂತ್ರ ಹೇಳಲು ಅವಕಾಶ ಇಲ್ಲ. ಹಿಂದೂ ದೇವಸ್ಥಾನಗಳಿಗೆ ಸಾಮಾನ್ಯವಾಗಿ ಭಕ್ತರ ದಂಡು ಹರಿದು ಬರುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸ್ಥಳಾವಕಾಶದ ಕೊರತೆಯೂ ಇದೆ.
ಸಾಮಾನ್ಯ ದಿನಗಳಲ್ಲಿ ತಿರುಪತಿಗೆ 80ರಿಂದ 1 ಲಕ್ಷ ಮಂದಿ ಭಕ್ತರು ಬರತ್ತಿದ್ದರು. ಆದ್ರೀಗ ಗರಿಷ್ಠ 6 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇಲ್ಲಿ ಸಿಬ್ಬಂದಿ ಕೂಡ ಸೋಂಕು ಹರಡದಂತೆ ರಕ್ಷಣಾ ವಸ್ತ್ರಗಳನ್ನು ಧರಿಸಲಿದ್ದು, ಭಕ್ತರ ಗಂಟಲು ದ್ರವನ್ನು ಪರೀಕ್ಷೆಗೊಳಪಡಿಸಲಿದ್ದಾರೆ ಎಂದು ತಿರುಪತಿ ಆಡಳಿತ ಮಂಡಳಿಯ ಕಾರ್ಯನಿರ್ವಹಣಾ ನಿರ್ದೇಶಕ ಅನಿಲ್ ಸಿಂಗಾಲ್ ತಿಳಿಸಿದ್ದಾರೆ.
ಹೋಟೆಲ್‌ಗಳಲ್ಲಿ ಶೇ. 50ರಷ್ಟು ಆಸನ ಕಡಿತ
ಗೃಹ ಸಚಿವಾಲಯ ಬಿಡುಗಡೆ ಮಾಡಿರುವ ಮಾರ್ಗಸೂಚಿಸಿಗಳಂತೆ ಹೋಟೆಲ್‌ಗಳು ಕೂಡ ಸೋಮವಾರದಿಂದ ಆರಂಭವಾಗುತ್ತಿದ್ದು, ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಜ್ವರ ತಪಾಸಣೆ ಮಾಡಬೇಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ರೆಸ್ಟೋರೆಂಟ್ ಸಂಘದ ಅಧ್ಯಕ್ಷ ಅನುರಾಗ್ ಕಟ್ರಿಯಾರ್, ಹಲವು ಮಾರ್ಗಸೂಚಿಗಳ ಮೂಲಕ ಹೋಟೆಲ್ ತೆರೆಯಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಆಸನಗಳ ಪ್ರಮಾಣವನ್ನು ಕಡಿಮೆ ಮಾಡಿರುವುದು ಆಗಿರುವ ನಷ್ಟವನ್ನು ಸರಿದೂಗಿಸಲು ಸ್ವಲ್ಪ ಮಟ್ಟಿಗೆ ಕಷ್ಟವಾಗಲಿದೆ ಎಂದು ಹೇಳಿದ್ದಾರೆ. ಜೂನ್ 8ರಿಂದ ಶೇ. 50ರಷ್ಟು ಆಸನಗಳ ಕಡಿತದೊಂದಿಗೆ ರೆಸ್ಟೋರೆಂಟ್‌ಗಳನ್ನು ಆರಂಭಿಸಲು ಕೆಲವವರು ನಿರ್ಧರಿಸಿದ್ದಾರೆ.