ನವದೆಹಲಿ: ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಭಾರತ ಹಲವು ರಾಷ್ಟ್ರಗಳಿಗೆ ಸ್ನೇಹ ಹಸ್ತ ಚಾಚಿದೆ. ವೈದ್ಯಕೀಯ ಸಹಾಯ ಚಾಚಿರುವ ಭಾರತ, ಮಾಲ್ಡೀವ್ಸ್, ಕೊಮೊರೊಸ್, ಮಾರಿಷಸ್, ಮಡಗಾಸ್ಕರ್ ಹಾಗೂ ಸೀಶೆಲ್ಸ್ ರಾಷ್ಟ್ರಗಳಿಗೆ ನೆರವು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತದ ನೌಕೆ ಕೇಸರಿ ಮೂಲಕ ವೈದ್ಯಕೀಯ ಉಪಕರಣಗಳು, ಅಗತ್ಯ ಔಷಧಿಗಳು, ಆಹಾರ ಸಾಮಗ್ರಿಗಳನ್ನು ಐದು ರಾಷ್ಟ್ರಗಳಿಗೆ ತಲುಪಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಈ ಮೂಲಕ ಸಂಕಷ್ಟದಲ್ಲಿರುವ ಅಕ್ಕಪಕ್ಕದ ರಾಷ್ಟ್ರಗಳಿಗೆ ಸ್ನೇಹ ಹಸ್ತ ಚಾಚುವ ಮೊದಲಿಗ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.
ಈ ರಾಷ್ಟ್ರಗಳ ಮನವಿ ಮೇರೆಗೆ ನಾವು ಕೋವಿಡ್ ಸಂಬಂಧಿ ವೈದ್ಯಕೀಯ ಸಾಮಗ್ರಿಯನ್ನು ತಲುಪಿಸಿದ್ದೇವೆ. ಮಾರಿಷಸ್ ಹಾಗೂ ಕೊಮೊರೊಸ್ ರಾಷ್ಟ್ರಗಳಿಗೆ ಕೋವಿಡ್ ಮಹಾಮಾರಿ ತಡೆಗೆ ವೈದ್ಯಕೀಯ ಸಹಾಯ ನೀಡಿದ್ದು, ಭಾರತದ ತಂಡ ಕೊಮೊರೊಸ್ನಲ್ಲಿರುವ ಡೆಂಗ್ಯೂ ಜ್ವರದ ವಿರುದ್ಧ ಹೋರಾಡಲು ಕೂಡಾ ಸಹಕರಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರಿಷಸ್ಗೆ ಆಯುರ್ವೇದಿಕ್ ಔಷಧಿಯನ್ನ ಹಾಗೂ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರಗಳನ್ನು ಕಳುಹಿಸಿಕೊಡಲಾಗಿದೆ. ಈ ಕಾರ್ಯಚರಣೆ ಮಿಷನ್ ಸಾಗರ್ ಅಡಿಯಲ್ಲಿ ನಡೆದಿದೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.