ನವದೆಹಲಿ: ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರದಿಂದ ತತ್ತರಿಸಿರುವ ಚೀನದ ಸ್ಥಳೀಯ ಕಂಪನಿಗಳು ಭಾರತದತ್ತ ಮುಖ ಮಾಡಿದ್ದು, ಕೇಂದ್ರ ಸರ್ಕಾರ ರತ್ನ ಗಂಬಳಿ ಹಾಸಿ ಅವುಗಳನ್ನು ಸ್ವಾಗತಸಲು ಸಜ್ಜಾಗಿದೆ.
ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಚೀನಾದಿಂದ ಬಂದು ಭಾರತದಲ್ಲಿ ಬಂಡವಾಳ ಹೂಡುವ ಕಂಪನಿಗಳಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಿದೆ. ಹಣಕಾಸಿನ ಉತ್ತೇಜಕಗಳಾದ ಪ್ರಾಶಸ್ತ್ಯ ತೆರಿಗೆ ದರ ಹಾಗೂ ತೆರಿಗೆ ರಜೆಯನ್ನು ವಿಯೆಟ್ನಾಂ ಮಾದರಿಯಲ್ಲಿ ನೀಡಲಿದೆ ಎಂದಿದ್ದಾರೆ.
ಈ ಉದ್ದೇಶಿತ ಯೋಜನೆಯು ಚರ್ಚೆಯ ಹಂತದಲ್ಲಿದ್ದು, ಕೈಗಾರಿಕಾ ವಲಯದ ಎಲೆಕ್ಟ್ರಾನಿಕ್ಸ್, ಗ್ರಾಹಕ ವಸ್ತು, ಎಲೆಕ್ಟ್ರಿಕ್ ವಾಹನ, ಪಾದರಕ್ಷೆ ಮತ್ತು ಆಟಿಕೆಯಂತಹ ತಯಾರಿಕ ಕಂಪನಿಗಳನ್ನು ಗುರುತಿಸಲಾಗಿದೆ ಎಂದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.
ವಿಯೆಟ್ನಾಂ ಮತ್ತು ಮಲೇಷ್ಯಾ ಸೇರಿದಂತೆ ಇತರೆ ಕೆಲ ರಾಷ್ಟ್ರಗಳು ಕಂಪನಿಗಳ ಮೇಲಿನ ಸುಂಕ ಕಡಿತಗೊಳಿಸಿ ಆರ್ಥಿಕ ಲಾಭ ಮಾಡಿಕೊಳ್ಳುತ್ತಿವೆ. ಆಮದು ಪ್ರಮಾಣ ತಗ್ಗಿಸಿ ವಿದೇಶಗಳ ಮೇಲಿನ ದೊಡ್ಡ ಮಟ್ಟದ ಹೊರೆಯನ್ನು ಇಳಿಸಿಕೊಳ್ಳಲು ಹಾಗೂ ರಫ್ತು ವಹಿವಾಟು ಉತ್ತೇಜಿಸಲು ಇಂತಹ ಯೋಜನೆಗೆ ಕೇಂದ್ರ ಸರ್ಕಾರ ಕೈಹಾಕಿದೆ. ಇದಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುಮೋದನೆ ದೊರೆಯಬೇಕಿದೆ ಎಂದು ಹೇಳಲಾಗುತ್ತಿದೆ.