ನವದೆಹಲಿ: ಜಗತ್ತನ್ನೇ ಕಂಗಾಲು ಮಾಡಿದ ಕೊರೊನಾ ವೈರಸ್ಗೆ ಲಸಿಕೆ ಅಥವಾ ಔಷಧಿಗಳು ದೊರೆಯದಿದ್ದರೆ 2021 ರ ಚಳಿಗಾಲದ ಅಂತ್ಯದ ವೇಳೆಗೆ ಭಾರತವು ದಿನಕ್ಕೆ 2.87 ಲಕ್ಷ ಸೋಂಕಿತ ಪ್ರಕರಣಗಳು ದಾಖಲಾಗಬಹುದು ಎಂದು ಮಸಾಸುಚೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಎಚ್ಚರಿಸಿದ್ದಾರೆ.
ಕೊರೊನಾ ವೈರಸ್ಗೆ ಪರಿಣಾಮಕಾರಿಯಾದ ಚಿಕಿತ್ಸೆ ಅಥವಾ ವ್ಯಾಕ್ಸಿನೇಷನ್ ದೊರೆಯದಿದ್ದರೆ 2021 ರ ಡಿಸೆಂಬರ್ ವೇಳೆಗೆ 249 ಮಿಲಿಯನ್ (24.9 ಕೋಟಿ) ಕೊರೊನಾ ಪ್ರಕರಣಗಳು ಮತ್ತು 1.8 ಮಿಲಿಯನ್ (18 ಲಕ್ಷ) ಸಾವುಗಳಿಗೆ ಜಗತ್ತು ಸಾಕ್ಷಿಯಾಗಬಹುದು ಎಂದು ಸಂಶೋಧಕರಾದ ಹಜೀರ್ ರಹಮಂದಾದ್, ಟಿವೈ ಲಿಮ್ ಮತ್ತು ಜಾನ್ ಸ್ಟರ್ಮನ್ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಅಧ್ಯಯನದ ಪ್ರಕಾರ, 2021 ರ ಚಳಿಗಾಲದ ಕೊನೆಯಲ್ಲಿ ಪ್ರತಿನಿತ್ಯದ ಸೋಂಕಿನ ಪ್ರಮಾಣದ ಅಗ್ರ 10 ದೇಶಗಳ ಪಟ್ಟಿಯಲ್ಲಿ ಭಾರತ ಇರಲಿದ್ದು, ಯುಎಸ್, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇರಲಿವೆ ಎನ್ನಲಾಗಿದೆ.
ವೈರಸ್ ಪೀಡಿತರು ಭಾರತದಲ್ಲಿ ಇನ್ನು ಮುಂದಿನ ದಿನಗಳಲ್ಲಿಯೂ ಹೆಚ್ಚಲಿದ್ದಾರೆ. ಅಮೆರಿಕದಲ್ಲಿ ದಿನಕ್ಕೆ 95,000 ಪ್ರಕರಣ, ದಕ್ಷಿಣ ಆಫ್ರಿಕಾದಲ್ಲಿ ದಿನಕ್ಕೆ 21,000 ಪ್ರಕರಣ, ಇರಾನ್ನಲ್ಲಿ ದಿನಕ್ಕೆ 17,000 ಪ್ರಕರಣ ಮತ್ತು ಇಂಡೋನೇಷ್ಯಾದಲ್ಲಿ ದಿನಕ್ಕೆ 13,000 ಪ್ರಕರಣಗಳು 2021 ರ ವೇಳೆಗೆ ದಾಖಲಾಗಲಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ವಿಶ್ವದಲ್ಲಿನ ಎಲ್ಲಾ ಜನರು ಹಾಗೂ ಪ್ರತಿ ಸಮುದಾಯವು ಕೊರೊನಾಗೆ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಾಗುವವರೆಗೂ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರವಹಿಸಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಬೆಳಗ್ಗಿನವರೆಗೆ, ಒಟ್ಟಾರೆ ಕೊರೊನಾ ಪ್ರಕರಣಗಳ ಸಂಖ್ಯೆ 11.7 ದಶಲಕ್ಷಕ್ಕಿಂತ ಹೆಚ್ಚಾಗಿದ್ದು, ಸಾವಿನ ಸಂಖ್ಯೆ 5,43,000 ತಲುಪಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.