ನವದೆಹಲಿ: ವಿದೇಶಗಳಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸುಮಾರು 14,800 ಮಂದಿಯನ್ನು ಕರೆತರಲು ಮೇ 7ರಿಂದ 13ರವರೆಗೆ ವಿಮಾನಯಾನ ಸೇವೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
ಏರ್ ಇಂಡಿಯಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಂಗಸಂಸ್ಥೆ ಈ ಕಾರ್ಯನಿರ್ವಹಿಸಲಿದ್ದು, ಸುಮಾರು 12 ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಕರೆತರಲಿದೆ. ಯುಎಇ, ಇಂಗ್ಲೆಂಡ್, ಅಮೆರಿಕ, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ, ಮಲೇಷಿಯಾ, ಫಿಲಿಪ್ಪಿನ್ಸ್ ಬಾಂಗ್ಲಾದೇಶ, ಬಹರೈನ್, ಕುವೈತ್ ಹಾಗೂ ಓಮನ್ ರಾಷ್ಟ್ರಗಳ ಭಾರತೀಯರನ್ನು ಕರೆತರುವ ಕಾರ್ಯ ಮೇ 7ರಿಂದ ನಡೆಯಲಿದೆ.
ಭಾರತದಲ್ಲಿ ಲಾಕ್ಡೌನ್ ಅವಧಿ ಮಾರ್ಚ್ 25ರಿಂದ ಮೇ 17ರವರೆಗೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮೊದಲೇ ರದ್ದಾಗಿದ್ದ ವಿಮಾನಯಾನ ಸೇವೆಗಳೂ ಯಥಾಸ್ಥಿತಿ ಕಾಪಾಡಿಕೊಂಡಿದ್ದವು. ಈಗ ಏರ್ ಇಂಡಿಯಾ ಸುಮಾರು 64 ವಿಮಾನಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸುತ್ತದೆ ಎಂದು ಹೇಳಲಾಗುತ್ತಿದೆ.
ಯುಎಇಗೆ 10, ಅಮೆರಿಕ ಹಾಗೂ ಇಂಗ್ಲೆಂಡಿಗೆ 7, ಸೌದಿ ಅರೇಬಿಯಾಗೆ 5, ಸಿಂಗಾಪುರಕ್ಕೆ 5, ಕತಾರ್ಗೆ ಎರಡು ವಿಮಾನಗಳು ದೇಶದ ವಿವಿಧ ಭಾಗಗಳಿಂದ ಹೊರಡಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.