ನವದೆಹಲಿ : 'ಹೈಮಾರ್ಕ್' ಹೆಸರಿನ ಪಾಕಿಸ್ತಾನದ ವಾಯುಪಡೆಯ ಯುದ್ಧ ಆಟದ ಮೇಲೆ ಹಾಗೂ ಫೈಟರ್ ಸೇರಿದಂತೆ ಇತರ ವಿಮಾನಯಾನದ ಮೇಲೆ ಭಾರತ ತೀವ್ರ ನಿಗಾವಹಿಸಿದೆ.
ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ಯುದ್ಧದ ಆಟಗಳನ್ನು ನಡೆಸುತ್ತಿದೆ. ಪಾಕ್ ವಾಯುಪಡೆ ಇಲ್ಲಿ ತನ್ನ ವೈಮಾನಿಕ ಕಸರತ್ತುಗಳನ್ನು ಪ್ರದರ್ಶಿಸಲಿದೆ. ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವಂತೆ ನೋಟಿಸ್ ಟು ಏರ್‌ಮೆನ್ (ನೋಟಾಮ್) ನೀಡಿದೆ ಎಂದು ಸರ್ಕಾರಿ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.
ಪಾಕಿಸ್ತಾನದ ಜೆಟ್‌ಗಳು ಚೀನಾದ ಜೆಎಫ್-17, ಎಫ್-16 ಮತ್ತು ಮಿರಾಜ್ -3ಗಳು ಸೇರಿದಂತೆ ತನ್ನ ಯುದ್ಧ ವಿಮಾನಗಳಿಂದ ರಾತ್ರಿ ಹಾರಾಟ ಸೇರಿದಂತೆ ವಿವಿಧ ತಂತ್ರಗಳನ್ನು ನಡೆಸುತ್ತಿದೆ. ಭಾರತೀಯ ವಾಯುಪಡೆಯು ಅದರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯು ನಡೆಸಿದ ಬಾಲಕೋಟ್ ವೈಮಾನಿಕ ದಾಳಿಯಂತಹ, ರಾತ್ರಿಯ ದಾಳಿಗಳ ವಿರುದ್ಧ ರಕ್ಷಿಸಲು ಪಾಕಿಸ್ತಾನದ ವಿಮಾನಗಳು ಅಭ್ಯಾಸ ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಜೆಟ್‌ಗಳು ಕಳೆದ ರಾತ್ರಿ ಕರಾಚಿ ನಗರದ ಮೇಲೆ ವ್ಯಾಪಕವಾಗಿ ಹಾರಾಟ ನಡೆಸಿವೆ. ಕಳೆದ ತಿಂಗಳು ಸಹ ಕಾಶ್ಮೀರದ ಹಂಡ್ವಾರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಕರ್ನಲ್ ಸಾವನ್ನಪ್ಪಿದ ನಂತರ ಭಾರತೀಯ ವಾಯುಪಡೆಯ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿ, ಪಾಕಿಸ್ತಾನ ರಾತ್ರಿ ಸಮಯದ ಹಾರಾಟವನ್ನು ಪ್ರಾರಂಭಿಸಿದೆ ಎನ್ನಲಾಗ್ತಿದೆ.