ನವದೆಹಲಿ: ಕೊರೊನಾ ಸೋಂಕಿಗೆ ಲಸಿಕೆ ನೀಡುವಾಗ ಎದುರಾಗುವ ಸವಾಲುಗಳನ್ನು ಗುರುತಿಸುವ ಸಲುವಾಗಿ ದೇಶದ ಎಲ್ಲಾ ರಾಜ್ಯಗಳ ಆಯ್ದ ನಗರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರ ಡ್ರೈ ರನ್ ಆರಂಭವಾಗಲಿದೆ.
ದೇಶದ ಎಲ್ಲೆಡೆಯಲ್ಲಿ ಡ್ರೈ ರನ್ ಆರಂಭಿಸುವ ಸಲುವಾಗಿ ಡಿಸೆಂಬರ್ 28 ಮತ್ತು 29ರಂದು ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳ 8 ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಪೂರ್ವಭಾವಿಯಾಗಿ ಲಸಿಕೆ ನೀಡಿತ್ತು. ಇದಾದ ನಂತರ ಕೆಲವು ಬದಲಾವಣೆಗಳೊಂದಿಗೆ ಈಗ ದೇಶಾದ್ಯಂತ ಡ್ರೈ ರನ್ ಆರಂಭಿಸಲಾಗುತ್ತಿದೆ.
ನಗರ ಪ್ರದೇಶಗಳಿಂದ ದೂರವಿರುವ, ಅಷ್ಟೇನೂ ಸೌಲಭ್ಯಗಳಿಲ್ಲ ಸ್ಥಳಗಳಲ್ಲಿಯೂ ಕೂಡಾ ಡ್ರೈರನ್ ನಡೆಸಿ ಸವಾಲುಗಳನ್ನು ಗುರುತಿಸಲಾಗುತ್ತಿದ್ದು, ಈ ತಾಲೀಮಿಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಲಸಿಕೆ ನೀಡುವ ಪ್ರತಿ ಸ್ಥಳದಲ್ಲಿಯೂ 25 ಮಂದಿ ಆರೋಗ್ಯ ಕಾರ್ಯಕರ್ತರು ಇರಲಿದ್ದು, ಲಸಿಕೆ ತೆಗೆದುಕೊಳ್ಳಲು ನೋಂದಣಿ ವಿಧಾನ, ಲಸಿಕೆ ನೀಡುವ ಬಗೆ, ಲಸಿಕೆ ತೆಗೆದುಕೊಂಡ ವ್ಯಕ್ತಿಯನ್ನು ಯಾವ ರೀತಿ ನಿಗಾ ಇಡಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ: ಹಕ್ಕಿಜ್ವರದ ಭೀತಿ ನಡುವೆ 53 ನವಿಲುಗಳ ಕಳೆಬರ ಪತ್ತೆ: ರಾಜಸ್ಥಾನದಲ್ಲಿ ಆತಂಕ
ಲಸಿಕೆ ನೀಡುವ ಸ್ಥಳಗಳಲ್ಲಿ ವೇಟಿಂಗ್ ರೂಮ್, ವ್ಯಾಕ್ಸಿನೇಷನ್ ರೂಮ್ ಹಾಗೂ ಅಬ್ಸರ್ವೇಷನ್ ರೂಮ್ ಎಂಬ ಮೂರು ಕೊಠಡಿಗಳಿರುತ್ತವೆ. ನಾಲ್ಕು ಆರೋಗ್ಯ ಕಾರ್ಯಕರ್ತರ ತಂಡ ದಾಖಲೆಗಳ ತಪಾಸಣೆ, ಫಲಾನುಭವಿಗಳ ನೋಂದಣಿ ಪರಿಶೀಲನೆ, ಲಸಿಕೆ ಪಡೆದ ವ್ಯಕ್ತಿಗಳ ಮೇಲೆ ನಿಗಾ ಹಾಗೂ ಜನದಟ್ಟಣೆ ನಿಯಂತ್ರಣ ಮಾಡಲು ಹಾಜರಿರುತ್ತಾರೆ.
ಕೆಲವು ಆರೋಗ್ಯ ಕಾರ್ಯಕರ್ತರ ತಂಡ ಕೋಲ್ಡ್ ಬಾಕ್ಸ್ ಹೊಂದಿರಲಿದ್ದು, ಲಸಿಕೆಯನ್ನು ನಿರ್ದಿಷ್ಟ ತಾಪಮಾನದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವ ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೋವಿಡ್ ವ್ಯಾಕ್ಸಿನೇಷನ್ ಡ್ರೈ ರನ್ ಉದ್ದೇಶ ಎಲ್ಲರನ್ನೂ ರೋಗ ನಿರೋಧಕ ಶಕ್ತಿಗೆ ಸಜ್ಜುಗೊಳಿಸುವುದಾಗಿದ್ದು, ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡವರಿಗೆ ಯಾವಾಗ ಲಸಿಕೆ ನೀಡಬೇಕೇಂಬ ಮಾಹಿತಿಯನ್ನು ಅವರ ಮೊಬೈಲ್ಗಳಿಗೆ ಕಳಿಸಲಾಗುತ್ತದೆ. ಲಸಿಕೆ ನೀಡಿದ ನಂತರ ಅವರಿಗೆ ಇ- ಪ್ರಮಾಣ ಪತ್ರ ನೀಡಲಾಗುತ್ತದೆ ಎಂದಿದ್ದಾರೆ.