ಲಡಾಖ್ : ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ನಡುವಿನ ಸಂಘರ್ಷ ಇನ್ನೂ ನಿಂತಿಲ್ಲ. ಸುಮಾರು ಆರು ತಿಂಗಳಿಗಿಂತ ಹೆಚ್ಚು ಕಾಲ ವಿವಾದ ಮುಂದುವರೆದಿದೆ. ಉಭಯ ರಾಷ್ಟ್ರಗಳ ಸೈನ್ಯವನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಂದಾಜಿಸಲಾಗುತ್ತಿದೆ.
ನವೆಂಬರ್ 6 ಚುಶುಲ್‌ನಲ್ಲಿ ಉಭಯ ರಾಷ್ಟ್ರಗಳ ನಡುವೆ ಎಂಟು ಸುತ್ತಿನ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ. ಈ ಮಾತುಕತೆಯ ನಂತರ ಸ್ವಲ್ಪ ಮಟ್ಟಿನ ಬದಲಾವಣೆಗಳಾಗುತ್ತಿವೆ. ಘರ್ಷಣೆ ನಡೆದ ಸ್ಥಳಗಳಿಂದ ಎರಡೂ ರಾಷ್ಟ್ರಗಳು ದೂರ ಸರಿಯಲಿವೆ. ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಕೆಲ ಚರ್ಚೆಗಳು ಮತ್ತು ಒಪ್ಪಂದಗಳನ್ನು ಚೀನಾ ಬಯಸುತ್ತಿರುವ ಕಾರಣದಿಂದ ಭಾರತದ ಕಡೆಯ ಅಧಿಕಾರಿಗಳೂ ಎಚ್ಚರಿಕೆಯಿಂದ ಮುಂದುವರೆಯುತ್ತಿದ್ದಾರೆ ಎಂದು ರಕ್ಷಣಾ ಮೂಲಗಳು ಸ್ಪಷ್ಟನೆ ನೀಡಿವೆ.
ಮೂಲಗಳ ಪ್ರಕಾರ, ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಸೇರಿದಂತೆ ಕೆಲವು ಚಟುವಟಿಕೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ನಡೆದ 8ನೇ ಸುತ್ತಿನ ಮಾತುಕತೆಯ ನಂತರ ಕೆಲ ಪ್ರಸ್ತಾಪಗಳು ಕಾರ್ಯಗತಗೊಳಿಸುವ ಮೊದಲು ಇನ್ನೂ ಕೆಲವು ವಿಷಯಗಳ ಬಗ್ಗೆ ಚರ್ಚಿಸಬೇಕಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶಗಳ ಉದ್ದಕ್ಕೂ ಸೇನೆಯನ್ನು ಹಿಂದಕ್ಕೆ ಪಡೆದುಕೊಳ್ಳುವ ಬಗ್ಗೆ ಎರಡೂ ರಾಷ್ಟ್ರಗಳು ಸಕಾರಾತ್ಮಕ ನಿಲುವುಗಳನ್ನು ಹೊಂದಿವೆ.
ಆದರೂ ಭಾರತ ಹಾಗೂ ಚೀನಾ ರಾಷ್ಟ್ರಗಳು ಗಡಿಯಲ್ಲಿ ಸೇನೆ ನಿಯೋಜನೆಯನ್ನು ಅಧಿಕಗೊಳಿಸುತ್ತಿವೆ. ಗಾಲ್ವಾನ್ ಬಳಿಯಿದ್ದ ಸುಮಾರು 60 ಸಾವಿರ ಸೈನಿಕರನ್ನು ಚೀನಾ ಬೇರೆಡೆಗೆ ಸ್ಥಳಾಂತರ ಮಾಡಿದೆ. ಭಾರತವೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ತನ್ನ ಕಡೆ ಅಷ್ಟೇ ಮಟ್ಟದ ಸೇನೆ ನಿಯೋಜಿಸಿದೆ.