ನವದೆಹಲಿ: ಕಿರ್ಗಿಸ್ತಾನದ ಬಿಶ್ಕೆಕ್ಗೆ ಪ್ರಧಾನಿ ಮೋದಿ ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಮೋದಿ ಪ್ರಯಾಣ ಮಾಡುವ ವಿಮಾನ ಪಾಕಿಸ್ತಾನದ ವಾಯುಮಾರ್ಗ ಬಳಸಲು ಅವಕಾಶ ಕೊಡಿ ಎಂದು ಭಾರತ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದೆ.
ಮುಂಬರುವ ಜೂನ್ 13 ಮತ್ತು 14 ರಂದು ಕಿರ್ಗಿಸ್ತಾನದ ಬಿಶ್ಕೆಕ್ನಲ್ಲಿ ನಡೆಯುವ ಶಾಂಘೈ ಸಹಕಾರ ಒಕ್ಕೂಟದ ಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಮೋದಿ ಪ್ರಯಾಣಿಸುವ ವಿಮಾನ ಪಾಕಿಸ್ತಾನದ ವಾಯು ಮಾರ್ಗದಲ್ಲೇ ಹೋಗಬೇಕಿದೆ. ಹಾಗಾಗಿ ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಏರ್ಸ್ಟ್ರೈಕ್ ನಡೆಸಿದ ನಂತರ ಪಾಕಿಸ್ತಾನ ತನ್ನೆಲ್ಲಾ ವಾಯುಮಾರ್ಗಗಳ ಮೇಲೆ ನಿರ್ಬಂಧ ವಿಧಿಸಿತ್ತು. ಇಲ್ಲಿಯವರೆಗೂ ಆ ನಿರ್ಬಂಧವನ್ನು ತೆರವುಗೊಳಿಸಿಲ್ಲ.
ಭಾರತ ಕೂಡ ಏರಸ್ಟ್ರೈಕ್ ನಡೆಸಿದ ನಂತರ ಫೆಬ್ರವರಿ 27 ರಿಂದ ದೇಶದ ವಾಯುಮಾರ್ಗಗಳ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಆದ್ರೆ ಕಳೆದ ಮೇ 31 ರಂದು ಈ ನಿರ್ಬಂಧವನ್ನು ತೆರವುಗೊಳಿಸಿದೆ.