ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಆರ್ಭಟ ಆರಂಭಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಗಾರು ಮಳೆಯ ಅಬ್ಬರ ಜೋರಾಗಿದೆ. ರಾಜಧಾನಿಯಲ್ಲಿ ಶನಿವಾರ ಸಂಜೆ ವ್ಯಾಪಕ ವರ್ಷಧಾರೆಯಾಗಿದೆ. ನಿರಂತರ ಒಂದು ತಾಸು ಸುರಿದ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸಂಚಾರವೂ ಅಸ್ತವ್ಯಸ್ತಗೊಂಡಿದೆ.
ಬಂಗಾಳಕೊಲ್ಲಿಯ ಪಶ್ಚಿಮ ಕೇಂದ್ರ ಮತ್ತು ಪಕ್ಕದ ದಕ್ಷಿಣ ಭಾಗದಲ್ಲಿ ಚಂಡಮಾರುತದ ಪರಿಚಲನೆಯು ಪಶ್ಚಿಮ ಬಂಗಾಲ ಕೊಲ್ಲಿಯತ್ತ ಚಲಿಸುತ್ತಿದೆ. ಇದರಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶನಿವಾರ ಸಂಜೆಯಿಂದ ಸುರಿದ ಮಳೆಗೆ ರಾಜಾಜಿನಗರ, ಮಲ್ಲೇಶ್ವರ, ಯಶವಂತಪುರ, ವಿಜಯನಗರ, ಮೆಜೆಸ್ಟಿಕ್, ಹೆಬ್ಬಾಳ, ಶಿವಾಜಿನಗರ, ಬಸವನಗುಡಿ, ಪುರವನ, ಕಾರ್ಪೋರೇಷನ್ ಸರ್ಕಲ್, ಕೆ.ಆರ್.ಮಾರ್ಕೆಟ್, ವೈಟ್‌ಫೀಲ್ಡ್, ಹಲಸೂರು, ಕೆ.ಆರ್.ಪುರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದೆ.
ಸಂಜೆ ಸುರಿದ ಮಳೆಯಿಂದಾಗ ಸಂಜೆ ಮನೆಗೆ ತೆರಳುವ ಧಾವಂತದಲ್ಲಿದ್ದ ವಿದ್ಯಾರ್ಥಿಗಳು, ಉದ್ಯೋಗಿಗಳು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಕೆಲವು ಕಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿವೆ. ದ್ವಿಚಕ್ರವಾಹನ ಸವಾರರು, ಸಣ್ಣ ವಾಹನಗಳಲ್ಲಿ ತೆರಳುತ್ತಿದ್ದವರಿಗೆ ತೀವ್ರ ತೊಂದರೆಯಾಯಿತು. ರಸ್ತೆಗಳಲ್ಲಿಯೇ ಮಳೆ ನೀರು ಹರಿದಿರುವುದರಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಮಳೆಯಲ್ಲಿ ನಿಂತಲ್ಲಿಯೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಶನಿವಾರ ಬೆಳಗ್ಗಿನಿಂದಲೇ ಹಲವೆಡೆ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಹಲವೆಡೆ ತುಂತುರು ಮಳೆಯಾಗಿತ್ತು. ನಂತರ ಸ್ವಲ್ಪ ಬಿಡುವು ನೀಡಿತ್ತು. ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳ ಜನರು ಆತಂಕಿತರಾಗಿದ್ದಾರೆ.
ಯೆಲ್ಲೋ ಅಲರ್ಟ್: ಹಿಂಗಾರು ಮಾರುತಗಳು ರಾಜ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಎಂಟ್ರಿ ಕೊಟ್ಟಿದ್ದು, ಮುಖ್ಯವಾಗಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಗಳ ಕಾಲ ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಲಿದೆ. ನಾಳೆಗೆ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಮಂಡ್ಯ, ರಾಮನಗರ ಜಿಲ್ಲೆಗಳಲ್ಲಿ ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವೆಡೆ ಸಾಧಾರಣ ಮಳೆಯಾಗುವ ಸಂಭವವಿದೆ. ಇನ್ನು ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಹಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಜ್ಯ ಆವರಿಸಿದ ಹಿಂಗಾರು ಮಾರುತಗಳು: ಈ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Post Monsoon in Karnataka