ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ಗುವಾಹತಿಯಲ್ಲಿ ನಡೆಯಲಿರುವ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಮಾತುಕತೆ ಮಹತ್ವ ಪಡೆದುಕೊಂಡಿದೆ. ಜಿ - 20 ಶೃಂಗಸಭೆಯಲ್ಲಿ ಸದಸ್ಯತ್ವ ಪಡೆದಿರುವುದು ಮತ್ತು ಜಿ - 8 ಶೃಂಗಸಭೆಯಲ್ಲಿ ಖಾಯಂ ಆಹ್ವಾನಿತ ರಾಷ್ಟ್ರವಾಗಿ ಹೊರ ಹೊಮ್ಮಿರುವುದರಿಂದ ಜಾಗತಿಕ ಆರ್ಥಿಕತೆಯಲ್ಲಿ ಭಾರತಕ್ಕೆ ಮಹತ್ವ ದೊರೆತಿದೆ. ಆದರೆ ಜಿ – 8 ಶೃಂಗಸಭೆಗೆ ಸಂಬಂಧಿಸಿದಂತೆ ಕೆನಡಾ ಪಾತ್ರ ಮಹತ್ವದ್ದಾಗಿತ್ತು. ವಿಚಿತ್ರ ಎಂದರೆ ಡಾ. ಮನಮಹೋನ್ ಸಿಂಗ್ ಅವರ ಸರ್ಕಾರ ಆ ಕುರಿತು ಹೆಚ್ಚು ಆಸಕ್ತಿ ತೋರಲಿಲ್ಲ. ಆದರೆ ಜಪಾನ್ ನೀಡಿರುವ ಬೆಂಬಲ ಭಾರತಕ್ಕೆ ಅನುಕೂಲಕರ ಆಗಿದೆ. ಎರಡೂ ದೇಶಗಳು ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದಕ್ಕೆ ಸಹಿ ಹಾಕುವುದರಿಂದ ಹಿಂದೆ ಸರಿದಿವೆ.
ತೀರಾ ಇತ್ತೀಚೆಗೆ ಟೊರೊಂಟೊದ ಜಿ 8 ಸಂಸ್ಥೆಯ ಜಾನ್ ಕಿರ್ಟನ್ ಈ ಬೆಳವಣಿಗೆಯನ್ನು ಎತ್ತಿ ತೋರಿಸಿದ್ದಾರೆ. ಶೇರ್ಪಾಗಳು ಮತ್ತು ಕೂಲಿಗಳ ಕುರಿತು ಉಲ್ಲೇಖವಿದ್ದ ಮೊದಲ ಆಹ್ವಾನಿತ ಪತ್ರಿಕೆಯನ್ನು ಆಧರಿಸಿ ಕೆನಡಾ ಪ್ರಧಾನಿ ಟ್ರುಡೊ ಅವರ ಜೀವನಚರಿತ್ರೆಕಾರರಾಗಿದ್ದ ಜಾನ್ ಇಂಗ್ಲಿಷ್ ಅವರು ಭಾರತ ಮತ್ತು ಚೀನಾದ ಪಾತ್ರವನ್ನು ತಮ್ಮ ಮೂಲ ಪ್ರಸ್ತಾವನೆಯಲ್ಲಿ ವಿವರಿಸಿದ್ದಾರೆ. ತನ್ನ ಹಣಕಾಸು ಕಾಳಜಿಗಳಿಗೆ ಪ್ರಾಮುಖ್ಯತೆ ದೊರೆತರೆ ಮಾತ್ರ ಭಾರತ ಆಸಕ್ತಿ ತೋರಲಿದೆ ಎಂಬುದು ಅವರ ವಾದ. ಗುವಾಹಟಿ ಸಭೆ ಆಧರಿಸಿ ಈ ಕುರಿತ ಕಾರ್ಯತಂತ್ರ ಮೂಡಿ ಬರಲಿದೆ.
ಪ್ರಸ್ತುತ ಹಂತದಲ್ಲಿ ಭಾರತ ಜಪಾನ್‌ನೊಂದಿಗೆ ಗಂಭೀರ ಆರ್ಥಿಕ ಹಿತಾಸಕ್ತಿ ಹೊಂದಿದೆ. ಜಪಾನಿನೊಟ್ಟಿಗೆ ನಮ್ಮ ದೇಶದ ರಫ್ತು ಸಂಬಂಧವನ್ನೇ ಗಣನೆಗೆ ತೆಗೆದುಕೊಳ್ಳಿ. ಅಸಮತೋಲಿತ ವ್ಯಾಪಾರ ಎಂದು ವಿದೇಶಾಂಗ ಕಚೇರಿಯತ್ತ ಬೊಬ್ಬೆ ಹೊಡೆಯುವ ಬದಲು ಆ ದೇಶದ ಆಹಾರ ಮತ್ತು ಕಚ್ಚಾ ವಸ್ತುಗಳ ಆಮದಿನಲ್ಲಿ ಭಾರತದ ಪಾತ್ರವನ್ನು ನಾವು ರೂಪಿಸಬೇಕು. ಏಕೆಂದರೆ ಆರ್ಥಿಕ ಮಟ್ಟ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಅದೊಂದು ಸಂಪನ್ಮೂಲ ವಿರಳ ಆರ್ಥಿಕತೆ ಆಗಿದೆ. ಉದಾ- ಭಾರತ ಅಕ್ಕಿಯನ್ನು ರಫ್ತು ಮಾಡುತ್ತದೆ. ಮತ್ತೊಂದೆಡೆ ಜಪಾನ್ ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾಗಿದೆ. ಭಾರತ ತನ್ನ ದೇಸಿ ಉತ್ಪಾದಕರಿಗೆ ಕ್ವಿಂಟಲ್‌ಗೆ ಸುಮಾರು ಮೂವತ್ತು ಸಾವಿರ ರೂಪಾಯಿಗಳಷ್ಟು ಸಹಾಯಧನ ನೀಡುತ್ತದೆ. ಜಪಾನಿಯರು ಅಂಟು ಅಂಟಾದ ಅಕ್ಕಿ ತಿನ್ನುತ್ತಾರೆ. ನಮ್ಮ ವಿಜ್ಞಾನಿಗಳು ಜಪೋನಿಕಾ ಪ್ರಭೇದದ ಭತ್ತವನ್ನು ಸುಲಭವಾಗಿ ಅಭಿವೃದ್ಧಿಪಡಿಸಬಹುದು ಮತ್ತು ನಾವು ಜಪಾನಿನೊಂದಿಗೆ ದೀರ್ಘಾವಧಿ ಒಪ್ಪಂದ ಮಾಡಿಕೊಂಡು ಐದು ಲಕ್ಷ ಎಕರೆ ಭೂಮಿಯನ್ನು ಅಂತಹ ಬೆಳೆ ಬೆಳೆಯಲು ಮೀಸಲಿಡಬಹುದು. ಜಪಾನಿಗರು ಸಮತೋಲಿತ ವ್ಯಾಪಾರದ ಕುರಿತ ಬೋಧನೆಗಳನ್ನು ವಿನಮ್ರವಾಗಿ ಕೇಳುತ್ತಾರೆ ಆದರೆ ವ್ಯಾಪಾರ ಪ್ರಸ್ತಾವನೆಗಳಿಗೆ ನೇರ ಜಿಗಿದು ಬಿಡುತ್ತಾರೆ. ಇಂತಹ ಇನ್ನೂ ಅನೇಕ ಉಪಾಯಗಳನ್ನು ಕಂಡುಕೊಳ್ಳುವುದು ಸಾಧ್ಯ. ನೆನಪಿಡಿ, ಯೋಜನಾ ಆಯೋಗವನ್ನು ರದ್ದುಗೊಳಿಸಿರುವುದರ ಹೊರತಾಗಿಯೂ ನಮ್ಮಲ್ಲಿ ನೀತಿ ಆಯೋಗದಂತಹ ಕಾರ್ಯಕಾರಿ ಯೋಜನಾ ಸಂಸ್ಥೆಗಳು ಕ್ರಿಯಾಶೀಲವಾಗಿವೆ.
ಜಪಾನ್ ಕಾರ್ಯಚಟುವಟಿಕೆಯ ಒಂದು ಲಕ್ಷಣ ಎಂದರೆ ಸಮಯ ಉಳಿಸುವ ಕ್ರಿಯೆ. ಇದು ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಭಾರತಕ್ಕೆ ತುಂಬಾ ಉಪಯುಕ್ತ. ವಿಶ್ವ ಬ್ಯಾಂಕ್ ಮತ್ತು ಅಂಗ ಸಂಸ್ಥೆಗಳು ಪ್ರಾಜೆಕ್ಟ್ ಅನುಮೋದನೆಗೆ ಮೊದಲು ಬಹಳ ಸಮಯ ತೆಗೆದುಕೊಳ್ಳುತ್ತವೆ. ನರ್ಮದಾ ಯೋಜನಾ ಸಮೂಹದ ಉಪಾಧ್ಯಕ್ಷನಾಗಿ ಮತ್ತು ವಿಜ್ಞಾನ ತಂತ್ರಜ್ಞಾನ ಹಾಗೂ ಇಂಧನ ಖಾತೆ ಕೇಂದ್ರ ಸಚಿವನಾಗಿ ನನ್ನ ಅನುಭವದ ಪ್ರಕಾರ ವೇಗವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಜಪಾನ್ ಮುಂದು. ಅವರು ತಜ್ಞರನ್ನು ಕಳುಹಿಸಿ ಒಂದು ಅವಲೋಕನ ನಡೆಸುತ್ತಾರೆ. ಬಳಿಕ ಅನುಷ್ಠಾನಕ್ಕೆ ಇಳಿದು ಬಿಡುತ್ತಾರೆ. ಪ್ರತಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೂಡಿಕೆ ದರ ಇಳಿಯುತ್ತ ಹೋಗಲಿದೆ. ಅದೇ ನಮಗೆ ಬೇಕಾಗಿರುವುದು. ಜಲ ಮತ್ತು ಇಂಧನ ಕ್ಷೇತ್ರದಲ್ಲಿ ಜಂಟಿ ಯೋಜನೆ ಕೈಗೊಂಡಾಗ ಜಪಾನ್ ಹೂಡಿಕೆಯ ವಿಚಾರದಲ್ಲಿ ವೇಗವಾಗಿ ಕೆಲಸ ಮಾಡಲಿದ್ದು ಅದು ಭಾರತಕ್ಕೆ ಅಗತ್ಯ. ಗುಜರಾತಿನ ಕೆವಾಡಿಯಾದಲ್ಲಿ ಜಾಗತಿಕ ಜಲಜ್ಞಾನ ಕಲಾ ಕೇಂದ್ರ ಸ್ಥಾಪಿಸಬೇಕು ಎಂಬುದು ನನ್ನ ಕನಸಾಗಿದ್ದು ಖಂಡಿತವಾಗಿ ಅಲ್ಲಿ ಏಕತಾ ಮೂರ್ತಿಯ ರೂಪದಲ್ಲಿ ನೆಲೆ ನಿಂತಿರುವ ಸರ್ದಾರ್ ಅವರು ಅದನ್ನು ಇಷ್ಟ ಪಡುತ್ತಾರೆ. ಜಪಾನಿಯರು ಅದಕ್ಕೆ ಧನ ಸಹಾಯ ಒದಗಿಸಲಿದ್ದಾರೆ ಎಂದು ನನಗೆ ಖಾತ್ರಿ ಇದ್ದು ಅದು ತೃತೀಯ ಜಗತ್ತಿಗೆ ತರಬೇತಿ ಕೇಂದ್ರವಾಗಿ ಹೊರಹೊಮ್ಮಲಿದೆ.
ಅಹಮದಾಬಾದ್ ಮತ್ತು ಮುಂಬೈ ನಡುವೆ ಶಿಂಕಾಯ್ ಸೆನ್ ಅಥವಾ ಬುಲೆಟ್ ರೈಲಿಗೆ ನಾವು ಚಾಲನೆ ನೀಡಬೇಕು. ಮರಗಳನ್ನು ಕತ್ತರಿಸುವ ಕುರಿತಂತೆ ಜಪಾನಿಯರು ಬಹಳ ಸೂಕ್ಷ್ಮಜ್ಞರಾಗಿರುತ್ತಾರೆ ಮತ್ತು ಮಹಾರಾಷ್ಟ್ರದ ಹೊಸ ಸರ್ಕಾರಕ್ಕೆ ವೃಕ್ಷ ಸಮಸ್ಯೆ ಪರಿಹರಿಸಿಕೊಳ್ಳಲು ಜಪಾನ್ ಸಹಾಯ ಮಾಡಬಹುದು ಎಂದು ನನಗೆ ಖಾತ್ರಿ ಇದೆ. ಒಬ್ಬನೇ ಒಬ್ಬ ಜಪಾನಿ ಪ್ರತಿಭಟನಾಕಾರನನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಅಲ್ಲಿನ ಸರ್ಕಾರ ತನ್ನ ಸುದೀರ್ಘ ಇತಿಹಾಸದಿಂದ ಕಂಡುಕೊಂಡಿದೆ. ಜಪಾನ್ ಮತ್ತು ಮುಖ್ಯಮಂತ್ರಿ ಠಾಕ್ರೆ ಅವರ ನಡುವೆ ಪರಸ್ಪರ ಮಾತುಕತೆ ಏರ್ಪಡುವಂತೆ ಮಾಡಲು ನಮಗೆ ಯಾವುದೇ ಅಡೆತಡೆ ಉಂಟಾಗದು.
ಕಡಿಮೆ ಬೋಧನೆ ಮತ್ತು ಹೆಚ್ಚು ಪ್ರಾಯೋಗಿಕ ವಿಚಾರಗಳ ಮೂಲಕ ಜಪಾನಿಯರೊಟ್ಟಿಗೆ ಉತ್ತಮ ತಾಲೀಮು ನಡೆಸುವುದು ಕತೆಯ ಒಟ್ಟಾರೆ ನೀತಿಸಾರ. ಕಾರ್ಯತಂತ್ರ ಯೋಜನೆಗಳ ಬಗ್ಗೆ ನಂಬಿಕೆ ಇರುವ ನಾವು ಯೋಜಿತ ಕಾರ್ಯತಂತ್ರದ ಮೂಲಕ ಅವರ ಬಳಿಗೆ ಹೋಗುವುದು ಸಹಾಯಕ ಆಗಲಿದೆ.
ಈ ಚಿಂತನೆಯ ಜೊತೆಗೆ ಭಾರತ ಮತ್ತು ಜಪಾನ್ ನಡುವೆ ಹೆಚ್ಚು ಸಾಂಸ್ಕೃತಿಕ ವಿನಿಮಯ ಅಗತ್ಯ ಎಂಬ ಪರಿಕಲ್ಪನೆಯನ್ನು ನಾವು ಪರಿಗಣಿಸಬಹುದು. ನಮ್ಮಂತೆಯೇ ಅವರದ್ದೂ ಬಹು ಧರ್ಮೀಯರ ನಾಡು. ಸಾಂಪ್ರದಾಯಿಕ ಶಿಂಟೋ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ ಮತ್ತು ಇಸ್ಲಾಂ ಧರ್ಮ ಎಲ್ಲವೂ ಇವೆ. ಕ್ಯೋಟೊ ಹೊರವಲಯದಲ್ಲಿರುವ ಪ್ರಾಚೀನ ಲಾರಾ ದೇವಾಲಯ ಹಿಂದೂ ಪ್ರತಿಮೆಗಳಿಂದ ಕೂಡಿದೆ. ಭಾರತದ ಹೊರಗೆ ಮಹಾಕಾವ್ಯಗಳ ನಾಯಕರು ಮತ್ತು ಖಳನಾಯಕರ ಬಗೆಗೆ ಗೊಂದಲ ಉಂಟಾಗುತ್ತದೆ. ಆದರೆ ಜಪಾನಿನ ಜಿಲ್ಲಾಕೇಂದ್ರವಾದ ಗಿಂಜಾದ ರಂಗಮಂದಿರದಲ್ಲಿ ಸಿಕ್ಕ ವಯೋವೃದ್ಧರೊಬ್ಬರು, ಭಾರತದ ಮಹಾನ್ ಗ್ರಂಥಗಳಿಂದ ಕಲಿತದ್ದು ಬಹಳಷ್ಟಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಆದರೆ ಈಗ ನಾವು ಅವರಿಂದ ಕಲಿಯಬೇಕು ಎಂದು ನಂಬುತ್ತೇನೆ. ಹಬ್ಬವೊಂದರಲ್ಲಿ ಜಪಾನಿ ಬೌದ್ಧರು ಸಸ್ಯಾಹಾರವನ್ನು ಮಾಂಸಾಹಾರದ ರೂಪದಲ್ಲಿ ನೀಡುತ್ತಾರೆ. ನಮ್ಮ ಪ್ರೀತಿಯ ನಂಬಿಕೆಗಳ ಬಗ್ಗೆ ನಮಗೆ ಶ್ರದ್ಧೆ ಇರಬೇಕು ಜೊತೆಗೆ ಇತರರೊಂದಿಗೆ ಸಹಕರಿಸಬೇಕಿದೆ.
ಪ್ರತಿ ವರ್ಷ ಜಪಾನ್ ಜಗತ್ತಿನಾದ್ಯಂತ ಕೆಲವು ವ್ಯಕ್ತಿಗಳನ್ನು ಆಯ್ಕೆ ಮಾಡುತ್ತದೆ ಮತ್ತು ಅವರಿಗೆ ಜಪಾನ್ ಪ್ರತಿಷ್ಠಾನದ ಫೆಲೋಶಿಪ್ ನೀಡುತ್ತದೆ. ಅವರು ಆರು ತಿಂಗಳ ಕಾಲ ಜಪಾನಿನಲ್ಲಿ ಉಳಿಯಬಹುದು. ನನ್ನನ್ನು ಒಮ್ಮೆ ಆಯ್ಕೆ ಮಾಡಲಾಗಿದ್ದು ಅಲ್ಲಿ ಒಂದು ತಿಂಗಳು ಕಳೆದಿದ್ದೇನೆ (ಕನಿಷ್ಠ ಅವಧಿ). ಜಪಾನಿನ ಘನತೆವೆತ್ತ ಕುಟುಂಬದ ಮಹಿಳೆಯೊಬ್ಬರು ನಿಮಗೆ ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ನಾನು ಜಪಾನ್‌ಗೆ ಹಲವು ಬಾರಿ ಹೋಗಿದ್ದೇನೆ, ಆದರೆ ಬೇರೆಯ ಭೇಟಿಗಳು ಇದರಷ್ಟು ಆಳವಾಗಿ ನನ್ನ ಒಳಗೆ ಇಳಿದಿಲ್ಲ. ನಮ್ಮ ಸ್ವಂತ ವಿವೇಕ ಬೆಳೆಸಿಕೊಳ್ಳಲಾದರೂ ನಾಗರಿಕ ಸಮಾಜದ ಮೂಲಕ ಜಪಾನ್‌ನೊಂದಿಗೆ ಸಾಂಸ್ಕೃತಿಕ ವಿನಿಮಯ ಏರ್ಪಡಿಸಿಕೊಳ್ಳುವುದು ಅಗತ್ಯ. ಆಗಮಾತ್ರ ಬಹುಶಃ ರಾಜಕೀಯದಿಂದ ಭ್ರಷ್ಟಾಚಾರವನ್ನು ತೊಲಗಿಸಿದಂತೆ ಆಗುತ್ತದೆ. ಅಲ್ಲಿಯ ಈಗಿನ ಪ್ರಧಾನಿ ಕೂಡ ಕ್ರಾಂತಿಕಾರಿ ಬದಲಾವಣೆಯಲ್ಲಿ ನಂಬಿಕೆ ಇರಿಸಿದವರು.
- ಯೋಗೀಂದರ್ ಕೆ ಅಲಘ್