ನವದೆಹಲಿ: ರೈತರ ಹಿತಾಸಕ್ತಿಗಾಗಿ ನಾವು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ. ರೈತರು ಸ್ವಾವಲಂಬಿಯಾಗಲು ಕಳೆದ ಐದು ವರ್ಷಗಳಿಂದ ಕ್ರಮ ಕೈಗೊಂಡಿದ್ದೇವೆ. ಇದರ ಪರಿಣಾಮದಿಂದಾಗಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಕೃಷಿ ವಲಯ ಅಭಿವೃದ್ಧಿಯನ್ನು ಕಂಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮೂವರು ನಾಗರಿಕರು ಹಾಗೂ 22 ಮಂದಿ ಪೊಲೀಸರ ಹತ್ಯೆಗೆ ಕಾರಣವಾದ 1922ರ ಚೌರಿ-ಚೌರಾ ಘಟನೆಗೆ 2022ಕ್ಕೆ ನೂರು ವರ್ಷಗಳು ತುಂಬುತ್ತಿದ್ದು, ಇದರ ಅಂಗವಾಗಿ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಚೌರಿ-ಚೌರಾ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದ ಪಿಎಂ ಮೋದಿ, ಚೌರಿ ಚೌರಾ ಘಟನೆ ಸ್ಮರಿಸುವ ಅಂಚೆಚೀಟಿಯನ್ನು ಬಿಡುಗಡೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಚೌರಿ ಚೌರಾ ಹೋರಾಟದಲ್ಲಿ ರೈತರ ಪಾತ್ರವೂ ಮುಖ್ಯವಾಗಿತ್ತು. ನಮ್ಮ ದೇಶದ ರೈತರ ಒಳಿತಿಗಾಗಿ ಆರು ವರ್ಷಗಳಿಂದ ಬಿಜೆಪಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಮಂಡಿಗಳ ಲಾಭ ರೈತರಿಗೆ ದೊರೆಯಲು ಹೆಚ್ಚುವರಿಯಾಗಿ ಒಂದು ಸಾವಿರ ಮಂಡಿಗಳನ್ನು e-NAM ಜೊತೆ ಲಿಂಕ್ ಮಾಡಿದ್ದೇವೆ ಎಂದು ತಮ್ಮ ನೂತನ ಕೃಷಿ ಕಾನೂನುಗಳನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
e-NAM, ಇದು ಭಾರತದಲ್ಲಿನ ಕೃಷಿ ಉತ್ಪನ್ನ, ಸರಕುಗಳ ಮಾರಾಟಕ್ಕಿರುವ ಆನ್‌ಲೈನ್ ವ್ಯಾಪಾರ ವೇದಿಕೆ ಅಥವಾ ಆನ್‌ಲೈನ್ ಮಾರುಕಟ್ಟೆಯಾಗಿದೆ. ಇಲ್ಲಿ ರೈತರು, ವ್ಯಾಪಾರಿಗಳು ಮತ್ತು ಖರೀದಿದಾರರು ಆನ್‌ಲೈನ್ ಮೂಲಕ ವಹಿವಾಟು ನಡೆಸಬಹುದಾಗಿದೆ.