ತಿರುವನಂತಪುರಂ(ಕೇರಳ): ದೇಶದ ಮೊದಲ ಕೋವಿಡ್-19 ಪ್ರಕರಣವನ್ನು ವರದಿ ಮಾಡಿದ್ದ ಕೇರಳ ಕೊರೊನಾ ಸೋಂಕು ಎದುರಿಸುವುದು ಹೇಗೆ ಎಂಬ ಬಗ್ಗೆ ಇಡೀ ಪ್ರಪಂಚಕ್ಕೆ ಒಂದು ಉದಾಹರಣೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಸದಸ್ಯರೊಬ್ಬರು ಹೇಳಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿರುವ ಆರೋಗ್ಯ ತಜ್ಞ ಮತ್ತು ಐಎಂಎ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಶ್ರೀಜಿತ್ ಎನ್ ಕುಮಾರ್, ಕೊರೊನಾ ಸೋಂಕನ್ನು ಹತೋಟಿಗೆ ತರುವಲ್ಲಿ ಕೇರಳ ಯಶಸ್ವಿಯಾಗಿದೆ. ಕೇರಳ ಮಾದರಿಭಾರತಕ್ಕೆ ಮಾತ್ರವಲ್ಲ, ಇಡೀ ಪ್ರಪಂಚವೇ ಒಂದು ಉದಾಹರಣೆಯಾಗಿ ಅನುಸರಿಸಬಹುದು ಎಂದಿದ್ದಾರೆ.
ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಕೇರಳ ಅಸಾಧಾರಣವಾಗಿ ಕಾರ್ಯ ನಿರ್ವಹಿಸಿದ್ದು, ಮಾರ್ಗಸೂಚಿಗಳ ಸರಿಯಾದ ಅನುಷ್ಠಾನವೇ ಯಶಸ್ಸಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಕೇರಳ ಯಾವುದೇ ಹೊಸ ವಿಧಾನವನ್ನು ಕಂಡುಕೊಂಡಿಲ್ಲ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆರೋಗ್ಯ ಸಚಿವಾಲಯವು ರೂಪಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಜಾರಿಗೆ ತಂದಿದೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆಡಳಿತ ಮತ್ತು ಸಾರ್ವಜನಿಕರು ಒಗ್ಗೂಡಬೇಕು. ಕೇರಳ ಮಾದರಿಯನ್ನು ಭಾರತ ಮಾತ್ರವಲ್ಲ, ಪ್ರಪಂಚವೇ ಅನುಸರಿಸಬೇಕು ಎಂದು ಹೇಳಿದ್ದಾರೆ.