ನವದೆಹಲಿ : ಕೇಂದ್ರದಿಂದ ಸುಮಾರು 60 ಲಕ್ಷ ಎಸ್‌ಸಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕಡಿತಗೊಳಿಸಲಾಗಿದೆ ಎಂಬ ಮಾಧ್ಯಮದ ವರದಿಯನ್ನಾಧರಿಸಿ ಮಾತನಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೇಶದಲ್ಲಿ ಆದಿವಾಸಿ ಮತ್ತು ದಲಿತರಿಗೆ ಶಿಕ್ಷಣಕ್ಕೆ ಪ್ರವೇಶ ನೀಡಬಾರದು ಎಂಬುದು ಬಿಜೆಪಿ ಹಾಗೂ ಆರ್ಎಸ್ಎಸ್ನ ಉದ್ದೇಶ ಎಂದು ಚಾಟಿ ಬೀಸಿದ್ದಾರೆ.
ಸರ್ಕಾರದ ವಿರುದ್ಧ ಟ್ವೀಟ್ ಮಾಡುವುದರ ಜೊತೆಗೆ 2017ರ ಸೂತ್ರದ ಅಡಿ 11 ಮತ್ತು 12ನೇ ತರಗತಿಯ 60ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಪ್ರಮುಖ ಕೇಂದ್ರ ವಿದ್ಯಾರ್ಥಿವೇತನ ಯೋಜನೆಯನ್ನು ಸುಮಾರು 14ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸ್ಥಗಿತಗೊಳಿಸಿದೆ ಎಂಬ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ಆದಿವಾಸಿಗಳು ಮತ್ತು ದಲಿತರಿಗೆ ಶಿಕ್ಷಣಕ್ಕೆ ಪ್ರವೇಶ ಇರಬಾರದು ಎಂಬುದು ಬಿಜೆಪಿ ಹಾಗೂ ಆರ್ಎಸ್ಎಸ್ನ ಉದ್ದೇಶವಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನಿಲ್ಲಿಸುವುದು ಅವರ ಸಾಧನೆ ಎಂದು ಟೀಕಿಸಿದ್ದಾರೆ.