ನವದೆಹಲಿ: ನೂತನ ಮೋಟಾರ್ ವಾಹನ (ತಿದ್ದುಪಡಿ) 2019 ಕಾಯ್ದೆ ಸೆಪ್ಟೆಂಬರ್ ಒಂದರಂದು ದೇಶಾದ್ಯಂತ ಜಾರಿಗೆ ಬಂದಿತ್ತು. ಸದ್ಯ ಟ್ರಾಫಿಕ್ ನಿಯಮ ಉಲ್ಲಂಘಿಸಿದವರು ಹೌಹಾರುವಂತಹ ದಂಡ ಕಟ್ಟಬೇಕಾದ ಸ್ಥಿತಿ ಇದೆ.
ನೂತನ ಮೋಟಾರ್ ವಾಹನ ಕಾಯ್ದೆ ಜಾರಿಯಾದ ಐದು ದಿನದಲ್ಲಿ ಹರಿಯಾಣ ಹಾಗೂ ಒಡಿಶಾ ರಾಜ್ಯಗಳಲ್ಲಿ ದಂಡದ ರೂಪದಲ್ಲಿ ವಸೂಲಾದ ಹಣ ಬರೋಬ್ಬರಿ ₹1.4 ಕೋಟಿ..!
ಮೋಟಾರ್ ವಾಹನ ಕಾಯ್ದೆ ಏಕೆ ಇಷ್ಟೊಂದು ಕಠಿಣ.. ಸಚಿವರ ಉತ್ತರ ಏನು ಗೊತ್ತಾ?
ಸೆಪ್ಟೆಂಬರ್ 5ರವರೆಗಿನ ಮಾಹಿತಿ ಪ್ರಕಾರ, ಹರಿಯಾಣ ರಾಜ್ಯದಲ್ಲಿ ₹52,32,650 ಲಕ್ಷ ಟ್ರಾಫಿಕ್ ಪೊಲೀಸರು ವಸೂಲಿ ಮಾಡಿದ್ದರೆ, ಒಡಿಶಾದಲ್ಲಿ ₹88,90,107 ಲಕ್ಷ ಹಣವನ್ನು ವಾಹನ ಸವಾರರು ದಂಡದ ರೂಪದಲ್ಲಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿ ನೂತನ ಕಾಯ್ದೆ ಜಾರಿಯಾದ ಪ್ರಥಮ ದಿನವೇ ಬರೋಬ್ಬರಿ 39 ಸಾವಿರ ವಾಹನ ಸವಾರರು ದಂಡ ಕಟ್ಟಿದ್ದರು. ಗುರುಗ್ರಾಮದಲ್ಲಿ ಹೆಲ್ಮೆಟ್ ಹಾಗೂ ದಾಖಲೆ ಇಲ್ಲದ ಪ್ರಯಾಣಕ್ಕೆ ಬೈಕ್ ಸವಾರನಿಗೆ ₹23 ಸಾವಿರ ದಂಡ ವಿಧಿಸಲಾಗಿತ್ತು. ಒಡಿಶಾದ ಭುವನೇಶ್ವರದಲ್ಲಿ ಆಟೋ ಚಾಲಕ ದಾಖಲೆ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ ₹47,500 ದಂಡ ಕಟ್ಟಿದ್ದ.
ರಸ್ತೆ ಅಪಘಾತವನ್ನು ಹತೋಟಿಗೆ ತರುವ ಹಾಗೂ ಸುರಕ್ಷಿತ ಮತ್ತು ಕಾನೂನುಬದ್ಧ ರಸ್ತೆ ಪ್ರಯಾಣವನ್ನು ಉತ್ತೇಜಿಸುವ ಸಲುವಾಗಿ ನೂತನ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಗುರುವಾರ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕಾಯ್ದೆ ಜಾರಿ ಬಗ್ಗೆ ಸ್ಪಷ್ಟನೆ ನೀಡಿದ್ದರು.