ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದ ರಾಜಕೀಯ ಸ್ಥಾನಮಾನಗಳನ್ನು ಬದಲಾಯಿಸಕೂಡದು ಎಂದು ಆಗ್ರಹಿಸಿ ಭಾರಿ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶಕ್ಕೆ ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನವನ್ನು ನೀಡಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆದೇಶ ಹೊರಡಿಸಿದ್ದಾರೆ.
"ಗಿಲ್ಗಿಟ್-ಬಾಲ್ಟಿಸ್ತಾನ್ಗೆ ನಾವು ತಾತ್ಕಾಲಿಕವಾಗಿ ಪ್ರತ್ಯೇಕ ಪ್ರಾಂತ್ಯದ ಸ್ಥಾನಮಾನ ನೀಡಿದ್ದನ್ನು ನಿಮಗೆ ತಿಳಿಸುವ ಸಲುವಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ." ಎಂದು ಗಿಲ್ಗಿಟ್-ಬಾಲ್ಟಿಸ್ತಾನ್ಗೆ ಭೇಟಿ ನೀಡಿರುವ ಪ್ರಧಾನಿ ಇಮ್ರಾನ್ ಹೇಳಿದ್ದಾರೆ.
ಒಂದು ಕಾಲದ ಪಾಕ್ ಆಪ್ತಮಿತ್ರ ಸೌದಿ ಅರೇಬಿಯಾ, ತನ್ನ ಪಾಕ್ ನಕಾಶೆಯಿಂದ ಗಿಲ್ಗಿಟ್-ಬಾಲ್ಟಿಸ್ತಾನ್ಗಳನ್ನು ಕೈಬಿಟ್ಟ ಬೆನ್ನಲ್ಲೇ ಪಾಕ್ ಈ ನಿರ್ಧಾರ ಕೈಗೊಂಡಿದೆ. ಆದರೆ ಪಾಕ್ನ ಈ ನಿರ್ಧಾರದಿಂದ ದೊಡ್ಡ ಮಟ್ಟದ ಪ್ರತಿಭಟನೆಗಳು ಹುಟ್ಟಿಕೊಳ್ಳುವ ಸಾಧ್ಯತೆಗಳಿವೆ.
ಕಳೆದ ಅಕ್ಟೋಬರ್ 8 ರಂದು ಪಾಕ್ ಆಕ್ರಮಿತ ಕಾಶ್ಮೀರದ ನಗರವಾದ ಮುಜಫ್ಫರಾಬಾದ್ನಲ್ಲಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಹಾಗೂ ಸ್ಟೂಡೆಂಟ್ ಲಿಬರೇಶನ್ ಫ್ರಂಟ್ಗಳ ವತಿಯಿಂದ ಪಾಕ್ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಗಿಲ್ಗಿಟ್-ಬಾಲ್ಟಿಸ್ತಾನ್ನ ರಾಜಕೀಯ ಹಾಗೂ ಭೌಗೋಳಿಕ ಸ್ಥಾನಮಾನಗಳನ್ನು ಬದಲಾಯಿಸುವ ಪಾಕ್ ಸರ್ಕಾರದ ಎಲ್ಲ ನಿರ್ಣಯಗಳ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಈ ಪ್ರದೇಶದ ಹೋರಾಟಗಾರರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.