ಆಂಧ್ರಪ್ರದೇಶ: ಕೊರೊನಾ ಭಾರತಕ್ಕೆ ಕಾಲಿಟ್ಟ ನಂತರ ಜನ ಜೀವನದಲ್ಲಿ ಸಾಕಷ್ಟು ಅವ್ಯವಸ್ಥೆಯನ್ನು ಸೃಷ್ಟಿಸಿದೆ ಎಂಬುದಕ್ಕೆ ವಿಜಯನಗರಂ ಜಿಲ್ಲೆಯ ಚಿಪುರುಪಲ್ಲಿಯ ವಂಗಪಲ್ಲಿ ಪೆಟಾದಲ್ಲಿ ವಾಸಿಸುತ್ತಿರುವ ರೆಡ್ಡಿ ಲಕ್ಷ್ಮಿ ನಾಯ್ಡು ಉದಾಹರಣೆ. ತಮಗಿದ್ದ ಐಐಐಟಿಯ ಅತಿಥಿ ಉಪನ್ಯಾಸಕ ಹುದ್ದೆಯನ್ನು ಕಳೆದುಕೊಂಡು ಇದೀಗ ಕುಟುಂಬ ನಿರ್ವಹಣೆಗಾಗಿ ದಿನಗೂಲಿ ಕೆಲಸಕ್ಕೆ ಬಂದಿರುವುದೇ ಸಾಕ್ಷಿ.
ಕೊರೊನಾ ಸೋಂಕಿನ ಹಿನ್ನೆಲೆ ಅವರನ್ನು ಮೇ ವರೆಗೆ ತಮ್ಮ ಅಧ್ಯಾಪಕ ಹುದ್ದೆಯಲ್ಲಿ ಮುಂದುವರೆಸಲಾಯಿತು. ಆದರೆ, ತದನಂತರ ಅವರಿಗೆ ನೀಡಲಾಗಿದ್ದ ಲ್ಯಾಪ್‌ಟಾಪ್ ಅನ್ನು ಸಹ ಸಂಸ್ಥೆ ವಾಪಸ್ ಪಡೆಯಿತು. ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಸಂಬಳ ನೀಡಲು ಸಾಧ್ಯವಾಗದ ಕಾರಣ ಅವರನ್ನು ಸಂಪೂರ್ಣವಾಗಿ ಕೆಲಸದಿಂದಲೇ ತೆಗೆದು ಮನೆಗೆ ಕಳುಹಿಸಲಾಯಿತು. ಈ ಸಮಸ್ಯೆ ಕೇವಲ ಇಲ್ಲಿ ಮಾತ್ರವಲ್ಲ. ಐಐಐಟಿಯಲ್ಲಿ ಸುಮಾರು 250 ಉದ್ಯೋಗಿಗಳ ಪರಿಸ್ಥಿತಿ ಇದೇ ರೀತಿಯಿದೆ. ನುಜಿವಿಡು, ಇಡುಪುಲಪಾಯ, ಒಂಗೋಲ್, ಮತ್ತು ಶ್ರೀಕಾಕುಲಂದಲ್ಲಿಯೂ ಪರಿಸ್ಥಿತಿ ಕರುಣಾಜನಕವಾಗಿದೆ.
ಇದೀಗ ತಮ್ಮ ಹುದ್ದೆಯನ್ನು ಕಳೆದುಕೊಂಡ ರೆಡ್ಡಿ ಲಕ್ಷ್ಮಿ ನಾಯ್ಡು, ತಮ್ಮ ಕುಟುಂಬವನ್ನು ಪೋಷಿಸಲು ಹೆಣಗಾಡುತ್ತಿದ್ದಾರೆ. ಸಂಸಾರ ನಿರ್ವಹಣೆಗಾಗಿ ಅವರು ಎಲ್ಲರ ಬಳಿಯೂ ಕೆಲಸಕ್ಕೆ ಅಂಗಲಾಚುತ್ತಿದ್ದಾರೆ. ಇದೀಗ ಕೆಲಸ ಹುಡುಕಿ ಸೋತಿರುವ ಅವರು, ಅನಿವಾರ್ಯವಾಗಿ ದಿನಕ್ಕೆ 300 ರೂಪಾಯಿಯ ಗಾರೆ ಕೆಲಸವನ್ನು ಹುಡುಕಿಕೊಂಡಿದ್ದಾರೆ.
ಐಐಐಟಿ, ವೇತನದ ಅರ್ಧದಷ್ಟು ಹಣವನ್ನು ಸಹ ನೀಡುತ್ತಿಲ್ಲ. ಸರ್ಕಾರ ನಮಗೆ ಸಹಾಯ ಮಾಡಬೇಕು. ಸುಮಾರು 250 ಕುಟುಂಬಗಳು ರಸ್ತೆಯಲ್ಲಿ ಬಿದ್ದಿವೆ. ಇನ್ನಾದರೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನಮ್ಮ ಕುಟುಂಬಗಳ ಸಂಕಟಗಳನ್ನು ನೋಡಿ, ನ್ಯಾಯ ಒದಗಿಸಬೇಕು ಎಂದು ಲಕ್ಷ್ಮಿ ನಾಯ್ಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.