ನವದೆಹಲಿ: ಕೊರೊನಾ ವೈರಸ್ ವೇಗವಾಗಿ ಕಂಡು ಹಿಡಿಯಲು ಬಳಸುವ ಕ್ಷಿಪ್ರ ಪರೀಕ್ಷಾ ಕಿಟ್ಗಳು, ತಪ್ಪಾದ ಫಲಿತಾಂಶವನ್ನು ನೀಡುತ್ತಿವೆ. ಹಾಗಾಗಿ ಕನಿಷ್ಠ ಎರಡು ದಿನಗಳವರೆಗೆ ಅವುಗಳ ಬಳಕೆಯನ್ನು ನಿಲ್ಲಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಂಗಳವಾರ ರಾಜ್ಯಗಳಿಗೆ ಸೂಚಿಸಿದೆ.
ಈ ಕಿಟ್ಗೆ ಸಂಬಂಧಿಸಿದಂತೆ ಸೋಮವಾರ ಒಂದು ರಾಜ್ಯ ದೂರನ್ನು ನೀಡಿತ್ತು. ಮಂಗಳವಾರ ಈ ಸಂಬಂಧ ಮತ್ತೆರಡು ರಾಜ್ಯಗಳನ್ನು ಕೇಳಿದಾಗ ಅವು ಕೂಡ ಇದೇ ಸಮಸ್ಯೆ ಎದುರಿಸುತ್ತಿವೆ. ಹಾಗಾಗಿ ಎರಡು ದಿನಗಳವರೆಗೆ ಕ್ಷಿಪ್ರ ಪರೀಕ್ಷಾ ಕಿಟ್ಗಳ ಬಳಕೆಯನ್ನು ನಿಲ್ಲಿಸುವಂತೆ ಐಸಿಎಂಆರ್ನ ಮುಖ್ಯ ವಿಜ್ಞಾನಿ ಡಾ. ರಾಮನ್ ಗಂಗಖೇಡ್ಕರ್ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ.
ರೋಗವು ಹೊಸದಾಗಿದೆ, ಪರೀಕ್ಷಾ ಕಿಟ್‌ಗಳನ್ನು ಪರಿಷ್ಕರಿಸಬೇಕಾಗಿರುವುದರಿಂದ ಕಿಟ್‌ಗಳನ್ನು ಲ್ಯಾಬ್ ಬದಲಾಗಿ ಆನ್-ಗ್ರೌಂಡ್ ತಂಡಗಳು ಪರೀಕ್ಷಿಸಿ ಮೌಲ್ಯೀಕರಿಸುತ್ತವೆ ಎಂದು ಐಸಿಎಂಆರ್ ಮುಖ್ಯ ವಿಜ್ಞಾನಿ ಹೇಳಿದ್ದಾರೆ.