ತಿರುವನಂತಪುರ: ಕೇರಳ ಆರೋಗ್ಯ ಸಚಿವೆ ಶೈಲಜಾ ಅವರು 'ಕೋವಿಡ್ ರಾಣಿ' ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದಿದ್ದ ಕೇರಳದ ಕಾಂಗ್ರೆಸ್ ಅಧ್ಯಕ್ಷ ಎಂ. ರಾಮಚಂದ್ರನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕೊಯಿಕೋಡ್ನಲ್ಲಿ ನಿಫಾ ವೈರಸ್ ಕಾಣಿಸಿಕೊಂಡಾಗ ಕೇವಲ ಪರಿಸ್ಥಿತಿ ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡು 'ನಿಪಾ ರಾಜಕುಮಾರಿ' ಎಂಬ ಬಿರುದನ್ನು ಗಳಿಸಿದರು. ಈಗ 'ಕೋವಿಡ್ ಕ್ವೀನ್' ಎಂಬ ಬಿರುದನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕೈ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಿಪಿಐ-ಎಂ ಮಹಿಳಾ ಸದಸ್ಯರು ಇಂದು ಕೊಯಿಕೋಡ್ ಜಿಲ್ಲೆಯ ರಾಮಚಂದ್ರನ್ ಅವರ ನಿವಾಸದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಾಮಚಂದ್ರನ್, ನಿಪಾ ವೈರಸ್ ವಿರುದ್ಧ ಹೋರಾಡಿದ ಸಂಪೂರ್ಣ ಕ್ರೆಡಿಟ್ ಕೊಯಿಕೋಡ್ನಲ್ಲಿ ಕಷ್ಟಪಟ್ಟು ದುಡಿಯುವ ವೈದ್ಯಕೀಯ ಸಿಬ್ಬಂದಿಗೆ ನೀಡಬೇಕು ಎಂದು ಹೇಳಿದ್ದಾರೆ.
'ನಾನು ನಿಪಾ ವಿರುದ್ಧದ ಹೋರಾಟದಲ್ಲಿ ಇರಲಿಲ್ಲ ಎಂಬ ಆರೋಪಗಳು ಕೇಳಿಬಂದ ನಂತರ, ನಾನು ಆಗ ಮಾಡಿದ ಕಾರ್ಯಗಳ ವೀಡಿಯೊಗಳನ್ನು ಬಿಡುಗಡೆ ಮಾಡಿದ್ದೇನೆ. ಶೈಲಜಾ ಅವರು ಕೇವಲ ಸಭೆಗಳ ಅಧ್ಯಕ್ಷತೆ ವಹಿಸಿದ್ದರಿಂದ ಅದನ್ನು ವೈಭವೀಕರಿಸುವ ಅಗತ್ಯವಿಲ್ಲ ಮತ್ತು ಆರೋಗ್ಯ ವೃತ್ತಿಪರರಿಗೆ ಪೂರ್ಣ ಮನ್ನಣೆ ನೀಡಬೇಕು. ನಾನು ನಿನ್ನೆ ಹೇಳಿದ್ದ ಹೇಳಿಕೆಗೆ ಬದ್ದನಾಗಿದ್ದೇನೆ. ನಾನು ಎಂದಿಗೂ ಮಹಿಳೆಯರನ್ನು ಕೀಳಾಗಿ ಕಾಣದ ವ್ಯಕ್ತಿ' ಎಂದು ರಾಮಚಂದ್ರನ್ ಹೇಳಿದ್ದಾರೆ.