ಹೈದರಾಬಾದ್: ಕೊರೊನಾ ಮಹಾಮಾರಿಯ ಲಾಕ್ಡೌನ್ ವೇಳೆ ಹಲವು ರಿಯಲ್ ಹಿರೋಗಳು ಸ್ವಇಚ್ಛೆಯಿಂದ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದ್ದಾರೆ. ಇನ್ನು ಕೆಲವರು ವಲಸಿಗರನ್ನು ತವರಿಗೆ ತಲುಪಿಸುವ ಕಾರ್ಯ ಮಾಡಿದ್ದಾರೆ. ಆದ್ರೆ ಹೈದರಾಬಾದ್ನಲ್ಲಿ ಓರ್ವ ವ್ಯಕ್ತಿ, ಹಸಿದವರ ಹೊಟ್ಟೆ ತುಂಬಿಸುವ ಸೇವೆಯಲ್ಲಿ ಇಂದಿಗೂ ಮುಂದುವರಿಸಿ ರಿಯಲ್ ಹೀರೊ ಆಗಿದ್ದಾರೆ.
ಹೆಸರು ರಾಮು ದೋಸಾಪತಿ. ಸಾಫ್ಟವೇರ್ ಸಂಸ್ಥೆಯಲ್ಲಿ ಹೆಚ್ಆರ್ ಮ್ಯಾನೇಜರ್ ಆಗಿರುವ ಇವರು ಇಂದಿಗೂ ಬಡವರಿಗೆ 'ರೈಸ್ ಎಟಿಎಂ' ಮೂಲಕ ಉಚಿತವಾಗಿ ಆಹಾರ ಧಾನ್ಯ ನೀಡುತ್ತಿದ್ದಾರೆ. ಇಲ್ಲಿನ ಎಲ್.ಬಿ.ನಗರದಲ್ಲಿನ ಇವರ ನಿವಾಸದಲ್ಲಿ ನಿತ್ಯ ನೂರಾರು ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ಇವರ ರೈಸ್ ಎಟಿಎಂ ದಿನಪೂರ್ತಿ ಓಪನ್ ಇರುತ್ತಿದ್ದು, ಹಸಿದವರು ಯಾವ ವೇಳೆಯಲ್ಲಾದ್ರೂ ಬರಬಹುದು.
ಕಳೆದ 170 ದಿನಗಳಿಂದ ಇವರ ಮನೆ ಮುಂದೆ ಜನರು ಸಾಲು ಸಾಮಾನ್ಯ ಎಂಬಂತಾಗಿದೆ. ಈವರೆಗೆ ಸುಮಾರು 15000 ಕುಟುಂಬಗಳಿಗೆ ತಮ್ಮ ಸ್ವಂತ ಹಣದಲ್ಲಿ ಇವರು ಸಹಾಯ ಮಾಡಿದ್ದರು. ಆ ಬಳಿಕ ಇದೀಗ ಕೆಲವರು ಇವರ ಬೆನ್ನಿಗೆ ನಿಂತು ಸಾಥ್ ನೀಡುತ್ತಿದ್ದಾರೆ.
ಉಳ್ಳವರು ತಮ್ಮ ತಮ್ಮ ಏರಿಯಾದಲ್ಲಿ ಹೀಗೆ ಕೆಲಸ ಮಾಡಬೇಕು. ಏಕೆಂದ್ರೆ ನಮ್ಮ ರೈಸ್ ಎಟಿಎಂಗೆ 15-20 ಕಿಮೀನಿಂದ ಜನ ಬರ್ತಿದಾರೆ. ಹೈದರಾಬಾದ್ನಲ್ಲಿ ಅಂದಾಜು 1 ಕೋಟಿ ಜನರಿದ್ದು, ಯಾರೂ ಕೂಡ ಉಪವಾಸ ಮಲಗಬಾರದು ಎನ್ನುವುದು ನನ್ನ ಆಸೆ ಎನ್ನುವುದು ರಾಮು ಅವರ ಮಾತು.
ತಾವು ಗಳಿಸಿದ ಹಣವನ್ನಷ್ಟೇ ಅಲ್ಲ, ತಮ್ಮ ಭವಿಷ್ಯ ನಿಧಿಯನ್ನು (ಪಿಎಫ್) ಕೂಡ ವಿತ್ಡ್ರಾ ಮಾಡಿಕೊಂಡು ಈ ಸೇವೆ ಮಾಡುತ್ತಿದ್ದಾರೆ. ಏಪ್ರಿಲ್ 13 ರಂದು 'ರೈಸ್ ಎಟಿಎಂ' ಆರಂಭಿಸಿದ್ದು, ಬಡವರು, ನಿರ್ಗತಿಕರು, ವಲಸಿಗರಿಗೆ ಇದು ಯಾವಾಗಲೂ ಲಭ್ಯ. ಇಲ್ಲಿ ರೈಸ್ ಮಾತ್ರವಲ್ಲ. ಜೊತೆಗೆ ಅಡುಗೆ ಎಣ್ಣೆ, ಬೇಳೆ, ಸಕ್ಕರೆ, ಕಾರದ ಪುಡಿ, ಅರಿಶಿನ ಹಾಗೂ ಟೀ ಪುಡಿ ಕೂಡ ಉಚಿತವಾಗಿ ಕೊಡಲಾಗುತ್ತಿದೆ.
ನಿತ್ಯ ಇಲ್ಲಿ 150-200 ಜನ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.