ಕೊಯಮತ್ತೂರು: ಚಲಿಸುತ್ತಿರುವ ಕಾರ್ನಿಂದ ಪತ್ನಿಯನ್ನು ಹೊರತಳ್ಳಿ ಕೊಲೆಗೆ ಯತ್ನಿಸಿದ್ದ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೊಯಮತ್ತೂರು ಜಿಲ್ಲೆಯ ಥುಡಿಯಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅರುಣ್ ಜೋ ಅಮಲ್ರಾಜ್ ಎಂಬುವವರು ತನ್ನ ಪತ್ನಿ ಅರ್ಥಿ ಎಂಬುವವರನ್ನು ಚಲಿಸುತ್ತಿರುವ ಕಾರ್ನಿಂದ ಹೊರ ತಳ್ಳಿದ್ದಾರೆ.
ತಿರುವಿನಲ್ಲಿ ಸಾಧಾರಣ ವೇಗದಲ್ಲಿ ಬಂದ ಕಾರು, ಹಿಂಬದಿಯ ಎಡಭಾಗದ ಕೊನೆಯಲ್ಲಿ ಕುಳಿತಿದ್ದ ಅರ್ಥಿ ಅವರು ಕೆಳಗೆ ಬಿದ್ದಿದ್ದಾರೆ. ಚಾಲಕ ಕಾರ್ ನಿಲ್ಲಸದೇ ಅದೇ ವೇಗದಲ್ಲಿ ಹೊರಟು ಹೋಗಿದ್ದಾರೆ. ಪಕ್ಕದಲ್ಲಿ ಇದ್ದ ಸ್ಥಳೀಯರು ಮಹಿಳೆಯ ನೆರವಿಗೆ ಧಾವಿಸಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಿಸಿಟಿವಿಯಲ್ಲಿನ ದೃಶ್ಯಾವಳಿಗಳಲ್ಲಿ ಅರ್ಥಿ ಅವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂಬುದನ್ನು ಬಿಂಬಿಸುತ್ತಿವೆ. ಸಂತ್ರಸ್ತೆಯ ಹೇಳಿಕೆ ಪಡೆದು ಆರೋಪಿ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.