ನವದೆಹಲಿ: ದೇಶಾದ್ಯಂತ ಶಾಲಾ, ಕಾಲೇಜುಗಳಲ್ಲೂ ಸಾಮಾಜಿಕ ಅಂತರದ ನಿಯಮ ಪಾಲನೆಯು ಕಡ್ಡಾಯವಾಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಕುರಿತ ನಿಯಮಾವಳಿಗಳನ್ನು ಸದ್ಯ ರೂಪಿಸುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಅಂತರ ಬಿಟ್ಟು ಕುಳಿತುಕೊಳ್ಳುವುದು, ಲೈಬ್ರರಿ ಹಾಗೂ ಮೆಸ್ಗಳಲ್ಲಿ ಕುಳಿತುಕೊಳ್ಳುವ ವಿಧಾನಗಳಲ್ಲಿ ಬದಲಾವಣೆ ಮುಂತಾದ ನಿಯಮಗಳು ಜಾರಿಗೆ ಬರಲಿವೆ.
ಶೈಕ್ಷಣಿಕ ಸಂಸ್ಥೆಗಳು ಆರಂಭವಾದ ನಂತರ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಸೂಕ್ತ ಸಾಮಾಜಿಕ ಅಂತರ ನಿಯಮ ಪಾಲಿಸಸಬೇಕಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗಳಿಗೆ ಸಂಬಂಧಿಸಿದಂತೆ ಬೆಳಗಿನ ಸಾಮೂಹಿಕ ಪ್ರಾರ್ಥನೆ, ಆಟೋಟಗಳು, ಶಾಲಾ ಬಸ್ಗಳಲ್ಲಿನ ಆಸನ ವ್ಯವಸ್ಥೆ ಮುಂತಾದ ವಿಷಯಗಳಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಇನ್ನು ಮಾಸ್ಕ್ಗಳು ಶಾಲಾ ಯುನಿಫಾರ್ಮ್ನ ಭಾಗವಾಗಲಿರುವುದು ವಿಶೇಷವಾಗಿದೆ. ಶಾಲಾ ಆವರಣಕ್ಕೆ ಹೊರಗಿನವರ ಪ್ರವೇಶ ನಿರ್ಬಂಧ, ಶಿಫ್ಟ್ಗಳಲ್ಲಿ ತರಗತಿ ನಡೆಸುವುದು ಮುಂತಾದ ನಿಯಮಗಳು ಜಾರಿಯಾಗಬಹುದು.
ಹೊಸ ವಿದ್ಯಾರ್ಥಿಗಳ ತರಗತಿಗಳು ಸೆಪ್ಟೆಂಬರ್ನಿಂದ ಹಾಗೂ ಈಗಾಗಲೇ ಇರುವ ವಿದ್ಯಾರ್ಥಿಗಳ ತರಗತಿಗಳು ಅಗಸ್ಟ್ನಿಂದ ಆರಂಭವಾಗಲಿವೆ. ಸೆಮಿಸ್ಟರ್ ಪರೀಕ್ಷೆಗಳನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ನಡೆಸಬಹುದಾಗಿದೆ ಎಂದು ಯುಜಿಸಿ ಈಗಾಗಲೇ ತಿಳಿಸಿದೆ. 10 ಹಾಗೂ 12 ನೇ ತರಗತಿಯ ಬಾಕಿ 29 ವಿಷಯಗಳ ಪರೀಕ್ಷೆಗಳು ನಂತರ ನಡೆಯಲಿರುವುದಾಗಿ ಸಿಬಿಎಸ್ಇ ಹೇಳಿದ್ದರೂ, ದಿನಾಂಕಗಳನ್ನು ಮಾತ್ರ ಘೋಷಿಸಿಲ್ಲ.