ಮುಂಬೈ: ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಕುರಿತಂತೆ ಸದ್ಯ ಬಿಡುಗಡೆಯಾಗಿರುವ ವರದಿ ಬೆಚ್ಚಿಬೀಳಿಸುವಂತಿದೆ.
2015ರಿಂದ 2018ರ ಅವಧಿಯಲ್ಲಿ ಸುಮಾರು 12,021 ರೈತರು ಸಾಲ ಮರುಪಾವತಿ ಸಾಧ್ಯವಾಗದೆ, ಕುಂಠಿತಗೊಂಡ ಬೆಳೆಯ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಾವಿನ ಸಂಖ್ಯೆಯನ್ನು ಆಧಾರವಾಗಿಸಿದರೆ ಮೂರು ವರ್ಷದ ಅವಧಿಯಲ್ಲಿ ಪ್ರತಿನಿತ್ಯ ಸರಾಸರಿ ಕನಿಷ್ಠ 8 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಜನವರಿ 2011ರಿಂದ 2014 ಡಿಸೆಂಬರ್ ಅವಧಿಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ 6,268 ಆಗಿತ್ತು. ಆದರೆ ನಂತರದಲ್ಲಿ ಇದು ದ್ವಿಗುಣವಾಗಿದ್ದು ಆತಂಕ ಮೂಡಿಸಿದೆ.
ಮಹಾರಾಷ್ಟ್ರದ ಪರಿಹಾರ ಮತ್ತು ಪುನರ್ವಸತಿ ಸಚಿವ ಸುಭಾಷ್ ದೇಶ್ಮುಖ್ ರೈತರ ಆತ್ಮಹತ್ಯೆಯ ಬಗ್ಗೆ ಅಂಕಿ-ಅಂಶ ಬಿಡುಗಡೆ ಮಾಡಿದ್ದಾರೆ.
ಈ ವರ್ಷದ ಜನವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಸುಮಾರು 610 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ಸರ್ಕಾರ ಭರವಸೆ ನೀಡಿರುವ ಮಧ್ಯೆಯೂ ಆತ್ಮಹತ್ಯೆ ಹೆಚ್ಚಳವಾಗಿದ್ದು ನಿಜಕ್ಕೂ ಆಶ್ಚರ್ಯಕರ ಎಂದು ಸುಭಾಷ್ ದೇಶ್ಮುಖ್ ಹೇಳಿದ್ದಾರೆ.
ಸರ್ಕಾರದ ಸಾಲಮನ್ನಾ ಪೂರ್ಣ ಪ್ರಮಾಣದಲ್ಲಿ ಯಶ ಕಂಡಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ. ಸಾಲಮನ್ನಾ ಜಾರಿಗೊಂಡ ಬಳಿಕ ಸುಮಾರು ಐದು ಸಾವಿರ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದು ಇದಕ್ಕೆ ಸಾಕ್ಷಿ ಎನ್ನುತ್ತಾರೆ ತಜ್ಞರು.