ಸಿರ್ಮೌರ್ (ಹಿಮಾಚಲ ಪ್ರದೇಶ): ಬೆಟ್ಟದ ರಾಜ್ಯ ಹಿಮಾಚಲ ಪ್ರದೇಶದಲ್ಲಿ ಪ್ಲಾಸ್ಟಿಕ್ ವಿರುದ್ಧ ಅನೇಕ ಸಂಸ್ಥೆಗಳೇ ಸಮರ ಸಾರಿವೆ.
ಸಿರ್ಮೌರ್ ಜಿಲ್ಲೆ ಲಾನಾ ಭಲ್ತಾ ಪಂಚಾಯತ್‌ನಡಿಯ ಬರುಸಾಹಿಬ್ ಹೆಸರಿನ ಪ್ಲಾಂಟ್ನಲ್ಲಿ ಇಂತಹ ಒಂದು ವಿನೂತನ ಪ್ರಯತ್ನ ನಡೀತಿದೆ. ಘನ ತ್ಯಾಜ್ಯ ನಿರ್ವಹಣೆಗೆ ಬರು ಸಾಹಿಬ್‌ನ ಕಲ್ಗೀಧರ್ ಟ್ರಸ್ಟ್ ಮುಂದೆ ಬಂದಿದೆ. ತನ್ನ ಹತ್ತಿರದ ಎಲ್ಲಾ ಪಂಚಾಯತ್‌ಗಳಿಂದ ತ್ಯಾಜ್ಯ ಸಂಗ್ರಹಿಸಲು ಒಂದು ಗಾಡಿ ನೇಮಿಸಿದೆ. ಸಂಗ್ರಹಿಸಿದ ತ್ಯಾಜ್ಯ ಏನು ಮಾಡ್ತಾರೆ ಅನ್ನೋದು ಕೂಡ ತುಂಬಾ ಇಂಟ್ರೆಸ್ಟಿಂಗ್.
ಎಲ್ಲಾ ಪಂಚಾಯತ್ನಿಂದ ಸಂಗ್ರಹಿಸಿದ ಕಸವನ್ನು ಒಂದು ಸೂಕ್ತ ಸ್ಥಳದಲ್ಲಿ ರಾಶಿ ಹಾಕಲಾಗುತ್ತೆ. ಅನಂತರ ಘನತ್ಯಾಜ್ಯವನ್ನು ವಿಂಗಡಿಸಲಾಗುತ್ತದೆ. ಅದರಲ್ಲಿ ದೊರೆತ ಒಣ ಕಸ ಅಂದರೆ ಪಾಲಿಥೀನ್, ಪ್ಲಾಸ್ಟಿಕ್ ವಸ್ತುಗಳನ್ನು ಕರಗಿಸಿ ಅದರಿಂದ ಇಟ್ಟಿಗೆ, ನೆಲಕ್ಕೆ ಅಳವಡಿಸಲು ಟೈಲ್ಸ್, ಪೇಪರ್ ಬ್ಯಾಗ್, ಫೈಲ್ ಕವರ್, ಸುಂದರ ಕುಂಡಗಳು ಹೀಗೆ ತರಹೇವಾರಿ ಉಪಯುಕ್ತ ವಸ್ತುಗಳನ್ನು ತಯಾರಿಸಲಾಗುತ್ತದೆ.
ಕೇಂದ್ರ, ರಾಜ್ಯ ಸರ್ಕಾರಗಳು ಅಗತ್ಯ ನೆರವು ನೀಡಿ ಇಂತಹ ವಿನೂತನ ಪ್ರಯತ್ನಕ್ಕೆ ಜನರನ್ನ, ಸಂಘ ಸಂಸ್ಥೆಗಳನ್ನ ಪ್ರೇರೇಪಿಸಬೇಕು. ಆ ಮೂಲಕ ಕಸದಿಂದ ರಸವೂ ಆದಂತಾಗುತ್ತೆ. ದೇಶದ ದೊಡ್ಡ ಶತ್ರು ಪಾಲಿಥೀನ್ ಹಾವಳಿಯಿಂದಲೂ ಮುಕ್ತಿ ಸಿಕ್ಕುತ್ತೆ.