ಕೋಲ್ಕತ್ತಾ: ಭಾರತ ತಂಡದ ವೇಗದ ಬೌಲರ್ ಶಮಿಯಿಂದ ದೂರವಿರುವ ಪತ್ನಿ ಹಸಿನ್ ಜಹಾನ್ಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಇಲ್ಲಿನ ಹೈಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ...
ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ಬಿಜೆಪಿ ನಾಯಕರ ಸಮ್ಮುಖದಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಸಲಾಗಿತ್ತು. ಈ ವೇಳೆ ಹಸಿನ್ ಜಹಾನ್ ಹಿಂದೂ ಸಹೋದರ-ಸಹೋದರಿಯರಿಗೆ ಶುಭ ಕೋರಿದ್ದರು. ಈ ಕಾರಣಕ್ಕಾಗಿ ಅನಾಮಧೇಯರಿಂದ ಜೀವ ಬೆದರಿಕೆ ಮತ್ತು ಅತ್ಯಾಚಾರ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಬರುತ್ತಿದ್ದವು. ಈ ಬಗ್ಗೆ ಹಸಿನ್ ಜಹಾನ್ ಕೋಲ್ಕತ್ತಾ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸಾಮಾಜಿಕ ಜಾಲತಾಣದ ಮೂಲಕ ನನ್ನನ್ನು ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ನನಗೆ ಅಸುರಕ್ಷಿತ ಭಾವನೆ ಮೂಡುತ್ತಿದ್ದು, ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ ನಾನು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆಯಿದೆ ಎಂದು ಹಸಿನ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ಇನ್ನು ಈ ಪ್ರಕರಣದ ಬಗ್ಗೆ ಪೊಲೀಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಹಸಿನ್ ಆರೋಪಿಸಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಹಸಿನ್ ಜಹಾನ್ ಪ್ರಕರಣದ ಅರ್ಜಿಯನ್ನು ಕೋರ್ಟ್ ಪರಿಶೀಲಿಸಿತು. ಆಕೆ ಪರ ವಕೀಲ ಆಶೀಷ್ ಚಕ್ರವರ್ತಿ ವಾದ ಮಂಡಿಸಿದರು. ನನ್ನ ಕಕ್ಷಿದಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಮತ್ತು ಅತ್ಯಾಚಾರ ಮಾಡುವುದಾಗಿ ಸಂದೇಶಗಳು ಬಂದಿವೆ ಎಂದು ವಕೀಲ ಆಶೀಷ್ ನ್ಯಾಯಾಲಯಕ್ಕೆ ಸಾಕ್ಷಿ ಸಮೇತ ರುಜುವಾತು ಮಾಡಿದರು. ಪ್ರಕರಣದ ವಿಷಯದಲ್ಲಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಶೀಷ್ ವಾದಿಸಿದರು.
ಈ ಬಗ್ಗೆ ಸ್ಪಂದಿಸಿದ ಸರ್ಕಾರಿ ವಕೀಲ ಅಮೀತ್ ಬ್ಯಾನರ್ಜಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಹೇಳಿದ್ದಾರೆ ಎಂದು ತಮ್ಮ ವಾದ ಮಂಡಿಸಿದರು.
ಇಬ್ಬರ ವಾದವನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಸ್ಪಷ್ಟಪಡಿಸಿತು. ಆಕೆಯ ದೂರಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಆಕೆಗೆ ಸೂಕ್ತ ಭದ್ರತೆ ಒದಗಿಸುವಂತೆ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ನಾಲ್ಕು ವಾರಗಳ ಬಳಿಕ ಪ್ರಕರಣ ಮತ್ತೊಮ್ಮೆ ಪರಿಶೀಲಿಸಲಾಗುವುದು. ಅಲ್ಲಿಯವರೆಗೆ ಆಕೆಗೆ ಭದ್ರತೆ ಒದಗಿಸುವಂತೆ ಹೈಕೋರ್ಟ್ ಹೇಳಿ ವಿಚಾರಣೆ ಮುಂದೂಡಿತು.