ನವದೆಹಲಿ : ಕೇಂದ್ರ ಸರ್ಕಾರದ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನೂತನ ಸಂಸತ್ ಭವನ ನಿರ್ಮಾಣಕ್ಕೆ ಪಾರಂಪರಿಕಾ ಸಂರಕ್ಷಣಾ ಸಮಿತಿ ಅನುಮತಿ ನೀಡಿದೆ.
ಸೆಂಟ್ರಲ್ ವಿಸ್ಟಾ ಯೋಜನೆಯಡಿ ನೂತನ ಸಂಸತ್ ಭವನ ನಿರ್ಮಾಣದ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ವಸತಿ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಹೇಳಿದ್ದಾರೆ. (ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಾರಂಪರಿಕಾ ಸಂರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ)
ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ, ಪರಿಸರ ನಿಯಮ ಉಲ್ಲಂಘನೆಯಾಗಿದೆ ಎಂದು ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಜನವರಿ 5ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಯೋಜನೆಯಿಂದ ಪರಿಸರಕ್ಕೆ ಯಾವುದೇ ಸಮಸ್ಯೆ ಅಥವಾ ಹಾನಿ ಉಂಟಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿ ಯೋಜನೆಗೆ ಪರಿಸರ ಇಲಾಖೆ ನೀಡಿರುವ ಅನುಮತಿ ಎತ್ತಿ ಹಿಡಿದಿತ್ತು. ಆದರೆ, ನಿರ್ಮಾಣ ಕಾರ್ಯ ಪ್ರಾರಂಭಿಸಲು ಪಾರಂಪರಿಕಾ ಸಂರಕ್ಷಣಾ ಸಮಿತಿಯಿಂದ ಅನುಮೋದನೆ ಪಡೆಯುವಂತೆ ಸೂಚಿಸಿತ್ತು.
ಇದನ್ನೂ ಓದಿ: ಕೃಷಿ ಕಾನೂನುಗಳನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಬಹುದೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ
ಸಂಸತ್ತಿನ ನೂತನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118ನೇ ಫ್ಲಾಟ್ನಲ್ಲಿ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. 971 ಕೋಟಿ ರೂ. ವೆಚ್ಚದಲ್ಲಿ 64,500 ಚದರ ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
2022ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯನ್ನು ಭಾರತ ಸರ್ಕಾರ ಇಟ್ಟುಕೊಂಡಿದೆ. ಕಳೆದ ಡಿಸೆಂಬರ್ 10ರಂದು ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು.