ಕಾಕಿನಾಡ (ಆಂಧ್ರ ಪ್ರದೇಶ): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಆಂಧ್ರ, ತೆಲಂಗಾಣದ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ.
ಇಂದು ಬೆಳಗ್ಗೆ 6.30 ರಿಂದ 7.30 ರ ಸುಮಾರಿಗೆ ಚಂಡಮಾರುತವು ಕಾಕಿನಾಡ ಕರಾವಳಿಯನ್ನು ದಾಟಿದೆ. ಗಂಟೆಗೆ 55 ರಿಂದ 65 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ, ವಿಜಯನಗರಂ, ವಿಶಾಖ ಪಟ್ಟಣಂ, ಕೃಷ್ಣ ಜಿಲ್ಲೆಗಳಲ್ಲಿ 11.5 ಸೆಂಟಿ ಮೀಟರ್ನಿಂದ 24 ಸೆಂಟಿ ಮೀಟರ್ವರೆಗೆ ಮಳೆಯಾಗಿದೆ.
ಮಚಿಲಿಪಟ್ನಂ, ವಿಶಾಖಪಟ್ಟಣಂ ಮತ್ತು ಗೋಪಾಲ್ಪುರದ ಕರಾವಳಿ ಭಾಗಗಳ ಮೇಲೆ ಡಾಪ್ಲರ್ ಹವಾಮಾನ ರಾಡಾರ್ಗಳು ನಿಗಾ ವಹಿಸಿವೆ. ತೆಲಂಗಾಣದ ಬಹು ಭಾಗಗಳಲ್ಲಿ ಚಂಡಮಾರುತದ ತೀವ್ರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕರ್ನಾಟಕ, ದಕ್ಷಿಣ ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶ, ದಕ್ಷಿಣ ಒಡಿಶಾಗಳಲ್ಲೂ ವರ್ಷಧಾರೆಯಾಗಲಿದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಭಾರಿ ಮಳೆಯಾಗುವುದರಿಂದ ಕರಾವಳಿ ಭಾಗದ ಜನರು ಸಮುದ್ರಕ್ಕಿಳಿಯದಂತೆ ಐಎಂಡಿ ಸೂಚನೆ ನೀಡಿದೆ.