ನವದೆಹಲಿ: ಕಳೆದ ವರ್ಷ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಜಗತ್ತು ಸಮರ ಸಾಧಿಸುತ್ತಿರುವ ನಡುವೆ ಬೀಜಿಂಗ್ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪ್ರಾಬಲ್ಯದ ವಿಧಾನದ ಮೂಲಕ ಅಂತಾರಾಷ್ಟ್ರೀಯ ತಾಳ್ಮೆಯನ್ನು ಪರೀಕ್ಷಿಸುವುದನ್ನು ಮುಂದುವರೆಸಿದೆ. ಅಲ್ಲಿನ ಇತರ ದೇಶಗಳ ಜತೆ ಭೂವಿವಾದಗಳಲ್ಲಿ ಚೀನಾ ಭಾಗಿಯಾಗಿದೆ.
ಭಾರತ ಮತ್ತು ಚೀನಾ ಲಡಾಖ್ ಪ್ರದೇಶದಲ್ಲಿ ಉದ್ವಿಗ್ನ ಗಡಿ ಸಂಘರ್ಷದಲ್ಲಿ ತೊಡಗಿರುವ ನಡುವೆಯೂ ಇದು ಮುಂದುವರಿದಿದೆ. ಇದರ ಪರಿಣಾಮವಾಗಿ ಕಳದ 45 ವರ್ಷಗಳಲ್ಲಿ ಮೊದಲ ಬಾರಿಗೆ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ)ಯಲ್ಲಿ ಸಾವು-ನೋವು ಸಂಭವಿಸಿದೆ ಮತ್ತು ಜಾಗತಿಕ ಕಳವಳಗಳಿಗೆ ನಾಂದಿ ಹಾಡಿದೆ.
ಕಳೆದ ವಾರ, ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನೌಕಾಪಡೆ ಉಭಯಚರ ದಾಳಿ ಚಟುವಟಿಕೆಗಳ ಮೂಲಕ ದಕ್ಷಿಣ ಚೀನಾ ಸಮುದ್ರದಲ್ಲಿ ನೌಕಾ ಸಮರಾಭ್ಯಾಸವನ್ನು ಪ್ರಾರಂಭಿಸಿತು.
ಪ್ಯಾರಾಸೆಲ್ ದ್ವೀಪಗಳ ಬಳಿ ಚೀನಾದ ಇತ್ತೀಚಿನ ಚಟುವಟಿಕೆಗಳನ್ನು ಎದುರಿಸಲು, ಅಮೆರಿಕ ದಕ್ಷಿಣ ಚೀನಾ ಸಮುದ್ರಕ್ಕೆ ಮೂರು ಪರಮಾಣು-ಚಾಲಿತ ವಿಮಾನವಾಹಕ ನೌಕೆಗಳನ್ನು ನಿಯೋಜಿಸಿದೆ.
ಭಾರತದಿಂದ ದಕ್ಷಿಣ ಚೀನಾ ಸಮುದ್ರಕ್ಕೆ ಮತ್ತು ಅದಕ್ಕೂ ಮೀರಿ ಹರಡಿರುವ ಚೀನಾದ ಇತ್ತೀಚಿನ ವಿಸ್ತರಣಾ ಯೋಜನೆಗಳಿಗೆ ಪ್ರತಿಕ್ರಿಯಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಜುಲೈ 8 ರಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು. ಹಿಮಾಲಯದ ಪರ್ವತ ಶ್ರೇಣಿಗಳಿಂದ ವಿಯೆಟ್ನಾಂನ ವಿಶೇಷ ವಲಯದವರೆಗೆ, ಸೆನ್ಕಾಕು ದ್ವೀಪಗಳು (ಪೂರ್ವ ಚೀನಾ ಸಮುದ್ರದಲ್ಲಿ ಜಪಾನ್ ಗಡಿಯವರೆಗೆ), ಮತ್ತು ಅದಕ್ಕೂ ಮೀರಿ, ಬೀಜಿಂಗ್ ಪ್ರಾದೇಶಿಕ ಭೂವಿವಾದಗಳನ್ನು ಪ್ರಚೋದಿಸುವ ಮಾದರಿಯನ್ನು ಹೊಂದಿದೆ. ಚೀನಾದ ಬೆದರಿಸುವಿಕೆ ತಂತ್ರಗಾರಿಕೆಗೆ ಜಗತ್ತು ಬಗ್ಗಬಾರದು ಮತ್ತು ಅದನ್ನು ಮುಂದುವರಿಸಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಮೈಕ್ ಪೊಂಪಿಯೊ ತಿಳಿಸಿದರು.
ಕಳೆದ ಬುಧವಾರ, ಬೀಜಿಂಗ್ ಮೂಲದ ವಿಶ್ಲೇಷಕರನ್ನು ಉಲ್ಲೇಖಿಸಿ, ಚೀನಾ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿ ಕಾರ್ಯನಿರ್ವಹಿಸುವ ಪ್ರಭಾವಿ ಇಂಗ್ಲಿಷ್ ಪತ್ರಿಕೆ ಗ್ಲೋಬಲ್ ಟೈಮ್ಸ್, "ಐದು ಯುಎಸ್ ಮಿಲಿಟರಿ ವಿಚಕ್ಷಣ ವಿಮಾನಗಳು ಸತತ ಮೂರು ದಿನಗಳ ಕಾಲ ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಹತ್ತಿರ ಹಾರಾಟ ನಡೆಸಿವೆ" ಎಂದು ವರದಿ ಮಾಡಿದೆ.
"ಯುಎಸ್ ಮಿಲಿಟರಿಯ ಪ್ರಚೋದನೆಗಳಿಗೆ ಪ್ರತಿಕ್ರಿಯೆಯಾಗಿ, ಪಿಎಲ್‌ಎ ವಿವಿಧ ಪ್ರತಿಕ್ರಮಗಳನ್ನು ತೆಗೆದುಕೊಳ್ಳಲು ಶಕ್ತವಾಗಿದೆ. ಯುಎಸ್ ವಿಮಾನಗಳನ್ನು ಸಮೀಪಿಸಲು ಫೈಟರ್ ಜೆಟ್‌ಗಳನ್ನು ಕಳುಹಿಸುವುದು ಮತ್ತು ಅವುಗಳನ್ನು ಚೀನಾದ ವಾಯುಗಡಿಪ್ರದೇಶದಿಂದ ಓಡಿಸುವುದು ಪ್ರತಿರೋಧಗಳಲ್ಲಿ ಒಂದಾಗಿದೆ" ಎಂದು ಗ್ಲೋಬಲ್ ಟೈಮ್ಸ್ ಎಚ್ಚರಿಸಿದೆ. "ಪಿಎಲ್‌ಎ ತನ್ನದೇ ಆದ ಕುಶಲತೆಯಿಂದ ಯುಎಸ್ ಮಿಲಿಟರಿಗೆ ತಕ್ಕ ಪ್ರತಿಕ್ರಿಯಿಯನ್ನು ನೀಡಲಿದೆ ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಥಿಂಕ್ ಟ್ಯಾಂಕ್‌ನ ಮ್ಯಾರಿಟೈಮ್ ಪೋಲಿಸ್ ಇನಿಶಿಯೇಟಿವ್‌ನ ಮುಖ್ಯಸ್ಥರಾಗಿರುವ ಅಭಿಜಿತ್ ಸಿಂಗ್ ಅವರ ಪ್ರಕಾರ, ಯುಎಸ್ ತನ್ನ ಯುದ್ಧನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸುತ್ತಿರುವುದು ಬೀಜಿಂಗ್‌ಗೆ ಸ್ಪಷ್ಟವಾಗಿ ತಿಳಿಸಿರುವ ಸಂದೇಶವಾಗಿದ್ದು, ಈ ಪ್ರದೇಶದಲ್ಲಿ ಚೀನಾ ತನ್ನ ಆಕ್ರಮಣ ನೀತಿಯನ್ನು ಮುಂದುವರಿಸಲು ಸಾಧ್ಯವಿಲ್ಲ.
ಇತ್ತೀಚಿನ ದಿನಗಳಲ್ಲಿ, ಈ ಪ್ರದೇಶದಲ್ಲಿ ಚೀನಾದ ಕಡಲ ಸೇನೆ (ನೌಕಾಪಡೆಗೆ ಸೇರಿರದ ಸಿಬ್ಬಂದಿ) ಚಟುವಟಿಕೆಗಳು ಹೆಚ್ಚಾಗಿದೆ" ಎಂದು ಸಿಂಗ್ ಈಟಿವಿ ಭಾರತಕ್ಕೆ ತಿಳಿಸಿದರು. "ಅವರ ಚಟುವಟಿಕೆಗಳು ಹೆಚ್ಚು ಎದ್ದುಕಾಣುತ್ತದೆ."
ಇದರಿಂದಾಗಿ ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳು ಯುಎಸ್ ಮತ್ತು ಜಪಾನ್‌ನಂತಹ ದೇಶಗಳ ಸಹಾಯವನ್ನು ಪಡೆಯಲು ಇದು ಕಾರಣವಾಗಿದೆ ಎಂದು ಅವರು ಹೇಳಿದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಚೀನೀ ಮತ್ತು ಆಗ್ನೇಯ ಏಷ್ಯನ್ ಅಧ್ಯಯನ ಕೇಂದ್ರದ ಚೀನೀ ಮತ್ತು ಚೀನಾ ಅಧ್ಯಯನಗಳ ಪ್ರಾಧ್ಯಾಪಕ ಬಿ.ಆರ್. ದೀಪಕ್ ಪ್ರಕಾರ ಚೀನಾದ ಇತ್ತೀಚಿನ ವಿಸ್ತರಣಾವಾದಿ ವರ್ತನೆಯು ತಕ್ಷಣದ ನಿರ್ದಾರವಲ್ಲ. ಅದು ಬಹು ದಿನಗಳಿಂದ ನಡೆಯುತ್ತಿತ್ತು.
"1979 ರಿಂದ, ಚೀನಾದ ಆದ್ಯತೆಯು ಸುಧಾರಣೆಗಳು ಮತ್ತು ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ" ಎಂದು ದೀಪಕ್ ತಿಳಿಸಿದರು. "2012 ರ ನಂತರ, ಕ್ಸಿ ಜಿನ್‌ಪಿಂಗ್ ಅಧ್ಯಕ್ಷರಾದಾಗ, ಅದು ಸಾಕಷ್ಟು ವಿಶ್ವಾಸ ಹೊಂದಿತು ಮತ್ತು ಅದರ ಆಕ್ರಮಣಕಾರಿ ನೀತಿ ನಿರೂಪಣೆಗಳನ್ನು ಮುಂಚೂಣಿಗೆ ತಂದಿತು." ಅವರು ಭಾರತ ಮತ್ತು ದಕ್ಷಿಣ ಚೀನಾ ಸಮುದ್ರ ದ್ವೀಪಗಳೊಂದಿಗಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ಪ್ರಾದೇಶಿಕ ಹಕ್ಕುಗಳ ನಡುವಿನ ಕುರಿತು ಗಮನ ಸೆಳೆದರು. ಅವರು ಮೊದಲು ಭೂಪ್ರದೇಶದ ಮೇಲೆ ಹಕ್ಕು ಸ್ಥಾಪಿಸುತ್ತಾರೆ. ನಂತರ ಅದನ್ನು ಪುನಃ ತಮ್ಮ ವಶಕ್ಕೆ ಪಡೆದುಕೊಳ್ಳುತ್ತಾರೆ. ನಂತರ ಅದನ್ನು ತಮ್ಮ ರಕ್ಷಣಾ ಶಕ್ತಿಯ ಬಲದಿಂದ ಸ್ವಾದೀನಕ್ಕೆ ಪಡೆದುಕೊಳ್ಳುತ್ತಾರೆ ಮತ್ತು ನಂತರ ಅದರ ಯಥಾಸ್ಥಿತಿಯನ್ನು ಬದಲಾಯಿಸುತ್ತಾರೆ. ಅದರ ನಂತರ, ಅವರ ಅಂತಾರಾಷ್ಟ್ರೀಯ ಪ್ರಭಾವದಿಂದ, ಜಾಗತಿಕ ವೇದಿಕೆಗಳಲ್ಲಿ ತಮ್ಮ ಹಕ್ಕುಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ ಎಂದು ದೀಪಕ್ ವಿವರಿಸಿದರು.
ಆದರೆ ಬೀಜಿಂಗ್‌ಗೆ ನಿದ್ದೆಗೆಡೆಸಿರುವ ವಿಚಾರ ಅಂದರೆ ಲಡಾಖ್‌ನಲ್ಲಿನ ಗಡಿ ಘರ್ಷಣೆ ನಂತರ ಭಾರತವು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡಿರುವ ಯೋಜನೆಗಳಾಗಿವೆ.
ಕಳೆದ ವಾರ ಅಂರ್ತಜಾಲ ವೇದಿಕೆಯ ಮೂಲಕ ವಿಚಾರ ಪ್ರಕಟಿಸಿರುವ ಫಿಲಿಪೈನ್ಸ್ ರಕ್ಷಣಾ ಸಚಿವ ಡೆಲ್ಫಿನ್ ಲೊರೆಂಜಾನಾ, ದಕ್ಷಿಣ ಚೀನಾ ಸಮುದ್ರದಲ್ಲಿ ಇತರ ದೇಶಗಳು ಹಾದುಹೋಗುವುದನ್ನು ಅಥವಾ ಅಲ್ಲಿ ಕಾರ್ಯಚರಣೆ ಮಾಡುವುದನ್ನು ನಾವು ತಡೆಯುವುದಿಲ್ಲ. ಬ್ರಿಟನ್, ದಕ್ಷಿಣ ಚೀನಾ ಸಮುದ್ರದ ಮೂಲಕ ಹಾದು ಹೋಗುತ್ತದೆ.ನಾವು ಅವರನ್ನು ಬರಲು ಆಹ್ವಾನಿಸಿರುವುದಿಲ್ಲ. ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತವು ಕಾರ್ಯಚರಣೆ ಮಾಡಲು ನಮ್ಮ ಸ್ವಾಗತವಿದೆ ಎಂದು ತಿಳಿಸಿದ ಲೊರೆಂಜಾನಾ, ಚೀನಾದ ಪಿಎಲ್‌ಎ ನೌಕಾಪಡೆಯ ಇತ್ತೀಚಿನ ನೌಕಾ ಸಮರಾಭ್ಯಾಸದ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಅವರ ಜತೆ ದೂರವಾಣಿ ಸಂಭಾಷಣೆ ನಡೆಸಿ, ಭಾರತವು ಫಿಲಿಪೈನ್ಸ್ ಅನ್ನು ಇಂಡೋ-ಪೆಸಿಫಿಕ್ನಲ್ಲಿ ಪ್ರಮುಖ ಪಾಲುದಾರನನ್ನಾಗಿ ಕಾಣುತ್ತದೆ ಎಂದು ತಿಳಿಸಿದ್ದರು. ಈ ಪ್ರದೇಶವು ಜಪಾನ್ನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿವರೆಗೆ ವ್ಯಾಪಿಸಿದೆ.
ಭಾರತವು, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ, ಈ ಪ್ರದೇಶದಲ್ಲಿ ಚೀನಾದ ಸಮರಾಭ್ಯಾಸದ ಹಿನ್ನೆಲೆಯಲ್ಲಿ ಇಂಡೋ-ಪೆಸಿಫಿಕ್ನ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿರುವ ತಂಡದ ಭಾಗವಾಗಿದೆ.
ಸಿಂಗ್ ಪ್ರಕಾರ, ದಕ್ಷಿಣ ಚೀನಾ ಸಮುದ್ರದಲ್ಲಿ ಭಾರತಕ್ಕೆ ನೇರ ಪಾಲುದಾರಿಕೆ ಇಲ್ಲದಿದ್ದರೂ, ನವದೆಹಲಿಯು ಈ ಪ್ರದೇಶದಲ್ಲಿ ಚೀನಾದ ಅತ್ಯಂತ ಆಕ್ರಮಣಕಾರಿ ನಡವಳಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
"ಹಿಮಾಲಯನ್ ಪ್ರದೇಶದಲ್ಲಿ ಚೀನಾ ಆಕ್ರಮಣಕಾರಿಯಾಗಿ ಮುಂದುವರಿದರೆ ಭಾರತವು (ದಕ್ಷಿಣ ಚೀನಾ ಸಮುದ್ರದಲ್ಲಿ) ಹೆಚ್ಚು ಬಲವಾದ ನಿಲುವನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುವುದು ಎಂದು ಅವರು ಹೇಳಿದರು.
ಕಳೆದ ತಿಂಗಳು, ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳ ನಾಯಕರ ಆನ್ ಲೈನ್ ವಾರ್ಷಿಕ ಶೃಂಗಸಭೆಯಲ್ಲಿ, ವಿಯೆಟ್ನಾಂ ಪ್ರಧಾನಿ ನ್ಗುಯೇನ್ ಕ್ಸುವಾನ್ ಫುಕ್ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಪುನರಾವರ್ತಿತ ಕಡಲ ಕಾನೂನು ನಿಯಮಗಳ ಉಲ್ಲಂಘನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.
"(ಕೋವಿಡ್ -19) ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಇಡೀ ಜಗತ್ತು ಬಡವಾಗಿದ್ದರೂ, ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಬೇಜವಾಬ್ದಾರಿ ಕೃತ್ಯಗಳು ಇನ್ನೂ ನಡೆಯುತ್ತಿವೆ, ಇದು ನಮ್ಮ ಪ್ರದೇಶ ಸೇರಿದಂತೆ ಕೆಲವು ಪ್ರದೇಶಗಳಲ್ಲಿನ ಸುರಕ್ಷತೆ ಮತ್ತು ಸ್ಥಿರತೆಗೆ ಪರಿಣಾಮ ಬೀರುತ್ತದೆ" ಎಂದು ಫುಕ್ ಗಮನಸೆಳೆದರು.
ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳ ನಾಯಕರ ಶೃಂಗಸಭೆಯ ನಂತರ ಹೊರಡಿಸಿದ ಜಂಟಿ ಹೇಳಿಕೆಯ ವಿವರ ಹೀಗಿದೆ:
ಸಾಗರ ವಲಯಗಳ ಮೇಲಿನ ಅದರ ಅರ್ಹತೆಗಳು, ಸಾರ್ವಭೌಮ ಹಕ್ಕುಗಳು, ವ್ಯಾಪ್ತಿ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳನ್ನು ನಿರ್ಧರಿಸಲು 1982 ರ UNCLOS (ಸಾಗರ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶ) ಆಧಾರವಾಗಿದೆ ಎಂದು ನಾವು ಪುನರುಚ್ಚರಿಸಿದ್ದೇವೆ.
ವಿಶ್ವ ಸಾಗರಗಳ ಬಳಕೆಗೆ ಸಂಬಂಧಿಸಿದಂತೆ ರಾಷ್ಟ್ರಗಳ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು UNCLOS ವ್ಯಾಖ್ಯಾನಿಸುತ್ತದೆ. ವ್ಯವಹಾರಗಳು, ಪರಿಸರ ಮತ್ತು ಸಮುದ್ರ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಗೆ ಮಾರ್ಗಸೂಚಿಗಳನ್ನು ಸ್ಥಾಪಿಸುವುದು ರಾಷ್ಟ್ರೀಯ ಸಾಗರ ಗಡಿಗಳನ್ನು ಮೀರಿದ ಎಲ್ಲಾ ಸಮುದ್ರ ವ್ಯಾಪ್ತಿಯು ಅಂತಾರಾಷ್ಟ್ರೀಯ ಸ್ವಾಮ್ಯಕ್ಕೆ ಒಳಪಡುತ್ತದೆ. ಇವು ರಾಷ್ಟ್ರಗಳಿಗೆ ಉಚಿತ. ಆದರೆ ಅದರ ಹಕ್ಕು ಯಾವ ರಾಷ್ಟ್ರಕ್ಕೂ ಸೇರಿಲ್ಲ. ಯುಎನ್‌ಸಿಎಲ್‌ಒಎಸ್ ಪ್ರಕಾರ, ಪ್ರಾದೇಶಿಕ ಸಮುದ್ರದ ಗಡಿಯು ದೇಶದ ಕರಾವಳಿ ರಾಜ್ಯದ ಭೂಭಾಗದಿಂದ 12 ನಾಟಿಕಲ್ ಮೈಲುಗಳಷ್ಟು ವ್ಯಾಪಿಸಿರುವ ಪ್ರದೇಶವೆಂದು ವ್ಯಾಖ್ಯಾನಿಸಲಾಗಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿನ ಚೀನಾದ ವಿವಾದಗಳು ಇತರ ದೇಶಗಳ ಜೊತೆಗೆ, ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಇತರ ದೇಶಗಳು ಹಕ್ಕು ಸಾಧಿಸುವ ದ್ವೀಪಗಳಾದ ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ಈ ವಿವಾದದ ಭಾಗವಾಗಿವೆ.
ಬ್ರೂನಿ, ಮಲೇಷ್ಯಾ, ಫಿಲಿಪೈನ್ಸ್, ತೈವಾನ್ ಮತ್ತು ವಿಯೆಟ್ನಾಂ ದೇಶಗಳು ಸ್ಪ್ರಾಟ್ಲಿ ದ್ವೀಪಗಳ ಮೇಲಿನ ಇತರ ಹಕ್ಕುದಾರರು ಆಗಿದ್ದರೆ, ಪ್ಯಾರಾಸೆಲ್ ದ್ವೀಪಗಳನ್ನು ವಿಯೆಟ್ನಾಂ ಮತ್ತು ತೈವಾನ್ ತಮ್ಮದೆಂದು ಪ್ರತಿಪಾದಿಸುತ್ತವೆ.
1974 ರಲ್ಲಿ ಪ್ಯಾರಾಸೆಲ್ ದ್ವೀಪಗಳು ವಿಯೆಟ್ನಾಂನ ಸ್ವಾಧೀನದಲ್ಲಿದ್ದವು. ಆದರೆ ಚೀನಾ ಅವುಗಳನ್ನು ಮಿಲಿಟರಿ ಕಾರ್ಯಚರಣೆ ಮೂಲಕ ತನ್ನ ಸುರ್ಪದಿಗೆ ಸೇರಿಸಿಕೊಂಡಿತು. ಎಂದು ದೀಪಕ್ ಸ್ಮರಿಸಿದರು.
ಈಗ, ಹೆಚ್ಚಿನ ಸ್ಪ್ರಾಟ್ಲಿ ದ್ವೀಪಗಳು, ಅವುಗಳಲ್ಲಿ ಸುಮಾರು 28 ವಿಯೆಟ್ನಾಂನ ಸ್ವಾಧೀನದಲ್ಲಿವೆ. ಆದರೆ ಚೀನಾವು ಅದನ್ನು ಮರು ವಶಪಡಿಸಿಕೊಳ್ಳಲು ಪ್ರಾರಂಭಿಸಿದೆ, ಎಂದು ಅವರು ಹೇಳಿದರು.
ಫಿಲಿಪೈನ್ಸ್ ವಿಚಾರಕ್ಕೆ ಬಂದರೆ, 2016 ರಲ್ಲಿ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯವು ದಕ್ಷಿಣ ಚೀನಾ ಸಮುದ್ರದಲ್ಲಿ ಮನಿಲಾದ ಹಕ್ಕುಗಳನ್ನು ಚೀನಾ ಉಲ್ಲಂಘಿಸಿದೆ ಎಂದು ತೀರ್ಪು ನೀಡಿತ್ತು. ಇದು ವಿಶ್ವದ ಅತ್ಯಂತ ಜನನಿಬಿಡ ವಾಣಿಜ್ಯ ಹಡಗು ಮಾರ್ಗಗಳಲ್ಲಿ ಒಂದಾಗಿದೆ.
ಫಿಲಿಪೈನ್ಸ್‌ನ ಮೀನುಗಾರಿಕೆ ಮತ್ತು ಪೆಟ್ರೋಲಿಯಂ ನಿಕ್ಷೇಪ ಪರಿಶೋಧನೆಗೆ ಚೀನಾ ಹಸ್ತಕ್ಷೇಪ ಮಾಡುವುದು, ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಿಸುವುದು ಮತ್ತು ಚೀನಾದ ಮೀನುಗಾರರು ಸಮುದ್ರ ವಲಯದಲ್ಲಿ ಮೀನುಗಾರಿಕೆ ಮಾಡುವುದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ಆರೋಪಿಸಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿನ ಸ್ಕಾರ್ಬರೋ ಶೋಲ್‌ನಲ್ಲಿ ಫಿಲಿಪೈನ್ಸ್‌ನ ಮೀನುಗಾರರಿಗೆ ಸಾಂಪ್ರದಾಯಿಕ ಮೀನುಗಾರಿಕೆ ಹಕ್ಕುಗಳಿವೆ ಮತ್ತು ಚೀನಾವು ಫಿಲಿಪೈನ್ಸ್ ಮೀನುಗಾರರಿಗೆ ಪ್ರವೇಶವನ್ನು ನಿರ್ಬಂಧಿಸುವ ಮೂಲಕ ಅವರ ಹಕ್ಕಗಳನ್ನು ಮೊಟಕುಗೊಳಿಸಿದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳು ಈಗ ವಿಶೇಷವಾಗಿ ವಿಯೆಟ್ನಾಂ ಮತ್ತು ಫಿಲಿಪೈನ್ಸ್ ಪ್ರಸ್ತಾಪಿಸಿದಂತೆ, ಚೀನಾವು ತನ್ನ ಪ್ರಾದೇಶಿಕ ಸಮುದ್ರ ಗಡಿಯನ್ನು ಮೀರಿ ಅಂತಾರಾಷ್ಟ್ರೀಯ ಸಮುದ್ರದಲ್ಲಿ ಸಮರಾಭ್ಯಾಸವನ್ನು ನಡೆಸುತ್ತಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿನ ವಿವಾದಗಳನ್ನು ಶಾಂತಿಯುತ ವಿಧಾನಗಳಿಂದ ಪರಿಹರಿಸಲು ಬೀಜಿಂಗ್ ಮತ್ತು ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳು ಒಪ್ಪಿದ 2002 ರ ನೀತಿ ಸಂಹಿತೆಯಿಂದ ಇದು ಸ್ಪಷ್ಟವಾದ ನಿರ್ಗಮನ ಎಂದು ವ್ಯಾಖ್ಯಾನಿಸಲಾಗಿದೆ.
ಆದಾಗ್ಯೂ, ಚೀನಾ ಈ ವಿವಾದಗಳನ್ನು ಈ ಪ್ರದೇಶದ ಪ್ರತ್ಯೇಕ ದೇಶಗಳೊಂದಿಗೆ ದ್ವಿಪಕ್ಷೀಯವಾಗಿ ಬಗೆಹರಿಸಲು ಬಯಸಿದರೆ, ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳು ಸಾಮೂಹಿಕ ನಿರ್ಧಾರವನ್ನು ತೆಗೆದುಕೊಂಡು, ಒಂದು ತಂಡವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ದೀಪಕ್ ವಿವರಿಸಿದರು.
"ಎರಡೂ ಕಡೆಯವರು ಈ ಕುರಿತು ಸಮತೋಲನವನ್ನು ಸಾಧಿಸುತ್ತಿದ್ದಾರೆ" ಎಂದು ಅವರು ಹೇಳಿದರು. ಚೀನಾ ತನ್ನ ಪ್ರಗತಿಶೀಲ ಆರ್ಥಿಕತೆಯ ಕಾರಣದಿಂದಾಗಿ ಈ ಪ್ರದೇಶದೊಂದಿಗಿನ ಸಂಬಂಧವನ್ನು ಕಡಿತಗೊಳಿಸಲು ಬಯಸುವುದಿಲ್ಲ.
" ಏಷ್ಯಾ ಖಂಡದ ಆಗ್ನೇಯ ರಾಷ್ಟ್ರಗಳೊಂದಿಗಿನ ಚೀನಾದ ವ್ಯಾಪಾರವು 600 ಶತಕೋಟಿ ಡಾಲರ್ (2019 ರಲ್ಲಿ) ಮತ್ತು ಅದಕ್ಕಾಗಿಯೇ ಯುಎಸ್ನಂತಹ ಸಾಗರದಾಚೆಯ ಶಕ್ತಿಗಳು ಈ ಪ್ರದೇಶದಿಂದ ಹೊರಗುಳಿಯಬೇಕೆಂದು ಅದು ಬಯಸುತ್ತದೆ" ಎಂದು ದೀಪಕ್ ವಿವರಿಸಿದರು.
ಮಾಜಿ ಅಧ್ಯಕ್ಷ ಹೂ ಜಿಂಟಾವೊ ಅವರನ್ನು "ಮಲಾಕ್ಕಾ ಸಂದಿಗ್ಧತೆ" ಎಂದು ಬಣ್ಣಿಸಿದ ಬಗ್ಗೆ ಚೀನಾ ಕೂಡ ಆತಂಕಕ್ಕೆ ಒಳಗಾಗಿದೆ. ಮಲಕ್ಕಾ ಜಲಸಂಧಿಯು ಮಲೇಷ್ಯಾ ಮತ್ತು ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ನಡುವಿನ ಕಿರಿದಾದ ನೀರಿನ ಪ್ರದೇಶವಾಗಿದೆ ಮತ್ತು ಇದು ದಕ್ಷಿಣ ಚೀನಾ ಸಮುದ್ರಕ್ಕೆ ನಿರ್ಣಾಯಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.
ಯುಎಸ್ ನಿಯಂತ್ರಣದಲ್ಲಿರುವ ಈ ಜಲಸಂಧಿಯನ್ನು ಅಪಾಯ ಎದುರಾದರೆ ಯಾವುದೇ ಸಮಯದಲ್ಲಿ ಮುಚ್ಚಬಹುದು. ಅಲ್ಲದೆ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಇಂಧನ ಪೂರೈಕೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ಚೀನಿಯರು ಆತಂಕಕ್ಕೆ ಒಳಗಾಗಿದ್ದಾರೆ.
ಈಗ, ಯುಎಸ್ ಮತ್ತೆ ತನ್ನ ಯುದ್ಧನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸುವುದರೊಂದಿಗೆ, ಮುಂದಿನ ದಿನಗಳಲ್ಲಿ ಈ ಪ್ರದೇಶದ ಬೆಳವಣಿಗೆಗಳ ಮೇಲೆ ಗಮನ ಇಡಲು ಹೆಚ್ಚು ಆಸಕ್ತಿದಾಯಕವಾಗಿದೆ.
ಲೇಖಕರು: ಅರೂನಿಮ್ ಭುಯಾನ್