ನವದೆಹಲಿ: ಜನವರಿ 5 ರಂದು ಜೆಎನ್‌ಯು ಕ್ಯಾಂಪಸ್ನಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಶಂಕಿತ ಗಲಭೆಕೋರರ ಫೊಟೋ ಬಿಡುಗಡೆ ಮಾಡಿದ್ದು, ಅದರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆಯಿಷಾ ಘೋಷ್ ಅವರ ಫೋಟೋ ಕೂಡ ಇದೆ.
ಪೊಲೀಸರು ಬಿಡುಗಡೆ ಮಾಡಿರು ಫೋಟೋ ಕುರಿತು ಪ್ರತಿಕ್ರಿಯೆ ನೀಡಿರುವ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆಯಿಷಾ ಘೋಷ್, ತಮ್ಮ ವಿರುದ್ಧ ಯಾವುದೇ ಪುರಾವೆಗಳು ಇದ್ದಲ್ಲಿ ದೆಹಲಿ ಪೊಲೀಸರು ಬಹಿರಂಗಪಡಿಸಬೇಕು ಎಂದಿದ್ದಾರೆ.
ನನ್ನ ಮೇಲೆ ಹೇಗೆ ಹಲ್ಲೆ ಮಾಡಲಾಗಿದೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ದೆಹಲಿ ಪೊಲೀಸರಿಗೆ ಹೆದರುವುದಿಲ್ಲ. ಕಾನೂನಿನೊಂದಿಗೆ ನಿಲ್ಲುತ್ತೇವೆ ಮತ್ತು ನಮ್ಮ ಆಂದೋಲನವನ್ನು ಶಾಂತಿಯುತವಾಗಿ ಮತ್ತು ಪ್ರಜಾಪ್ರಭುತ್ವದ ದಾರಿಯಲ್ಲಿ ಮುನ್ನಡೆಸುತ್ತೇವೆ ಎಂದಿದ್ದಾರೆ.
ಜೆಎನ್‌ಯು ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಒಂಬತ್ತು ಮಂದಿ ಶಂಕಿತರ ಚಿತ್ರಗಳನ್ನು ಬಿಡುಗಡೆ ಮಾಡಿದ್ದು, ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಷಾ ಘೋಷ್ ಕೂಡ ಒಬ್ಬರು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಹಾಸ್ಟೆಲ್ನ ನಿರ್ದಿಷ್ಟ ಕೊಠಡಿಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ, ಜಾಯ್ ಟಿರ್ಕಿ ತಿಳಿಸಿದ್ದಾರೆ.