ನವದೆಹಲಿ/ಚೆನ್ನೈ: ವ್ಯವಹಾರ ವಿಶ್ವಾಸವನ್ನು ಮರುಸ್ಥಾಪಿಸುವ ಹಂತಗಳ ಭಾಗವಾಗಿ ಎನ್‌ಡಿಎ ಸರ್ಕಾರ, ಆದಾಯ ತೆರಿಗೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಯನ್ನು ಅಪರಾಧ ಮುಕ್ತಗೊಳಿಸಲು ಮುಂದಾಗಿದೆ.
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2024 ರ ವೇಳೆಗೆ ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ಏರಿಸುವ ಬೃಹತ್ ಗುರಿ ಹಾಕಿಕೊಂಡಿದ್ದು, ಐದು ಟ್ರಿಲಿಯನ್ ಆರ್ಥಿಕತೆಗೆ ದೇಶವನ್ನು ತೆಗೆದುಕೊಂಡು ಹೋಗಲು ರೂಪಿಸಿರುವ ಯೋಜನೆಗಳಲ್ಲಿ ಇದೂ ಕೂಡ ಒಂದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ಭಾನುವಾರ ನಡೆದ ನಾನಿ ಪಾಲ್ಖಿವಾಲಾ ಶತಮಾನೋತ್ಸವ ಸಮಾರಂಭದಲ್ಲಿ '5 ಟ್ರಿಲಿಯನ್ ಆರ್ಥಿಕತೆಗೆ ಮಾರ್ಗಸೂಚಿ' ಎಂಬ ವಿಷಯದ ಕುರಿತ ಮಾತನಾಡಿದ ಸೀತಾರಾಮನ್, ಕಾರ್ಪೊರೇಟ್ ಕಾನೂನುಗಳನ್ನು ಅಪರಾಧ ಮುಕ್ತಗೊಳಿಸುವುದು, ತೆರಿಗೆ ವಿವಾದಗಳನ್ನು ಬಗೆಹರಿಸುವುದು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ತ್ವರಿತ ಖಾಸಗೀಕರಣಗೊಳಿಸುವುದು- ಇವು ಸರ್ಕಾರ ತನ್ನ ಗುರಿ ಸಾಧಿಸಲು ರೂಪಿಸಿರುವ ಕ್ರಮಗಳಲ್ಲಿ ಸೇರಿವೆ. 'ಕಂಪನಿ ಕಾಯ್ದೆ'ಯಲ್ಲಿ ಬದಲಾವಣೆ ತರಲು ಸರ್ಕಾರ ಇಚ್ಛಿಸಿದ್ದು, ಇದರ ಭಾಗವಾಗಿ ಆದಾಯ ತೆರಿಗೆ ಕಾಯ್ದೆ ಹಾಗೂ ಮನಿ ಲಾಂಡರಿಂಗ್ ತಡೆಯಂತಹ ಕಾಯ್ದೆಗಳನ್ನು ಅಪರಾಧ ಮುಕ್ತಗೊಳಿಸಲು ಅಥವಾ ಶಿಕ್ಷೆಯನ್ನು ಕೇವಲ ದಂಡಕ್ಕೆ ಸೀಮಿತಗೊಳಿಸಲು ಸುಮಾರು 46 ದಂಡದ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕ ಹಿತಾಸಕ್ತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಂಪತ್ತಿನ ಸೃಷ್ಟಿಕರ್ತರನ್ನು ಅನುಮಾನದಿಂದ ನೋಡಬಾರದು, ಏಕೆಂದರೆ ಸಂಪತ್ತನ್ನು ಸೃಷ್ಟಿಸಿದಾಗ ಮಾತ್ರ ಅದನ್ನು ವಿತರಿಸಬಹುದಾಗಿದೆ ಎಂದು ಹೇಳಿದ್ದರು. ಇದೇ ನಿಟ್ಟಿನಲ್ಲಿ ಮಾತನಾಡಿರುವ ಸೀತಾರಾಮನ್, ವ್ಯಾಪಾರವನ್ನು ಅನುಮಾನದಿಂದ ನೋಡುವ ಕಾನೂನು ನಮಗೆ ಬೇಡ ಎಂದು ತಿಳಿಸಿದ್ದಾರೆ.