ನವದೆಹಲಿ: ವಾರ್ಷಿಕ ಶೇ 4ರಷ್ಟು ರಿಯಾಯಿತಿ ದರದಲ್ಲಿ ಅಲ್ಪಾವಧಿಯ ಬೆಳೆ ಸಾಲ ಪಡೆದ ರೈತರು ಯಾವುದೇ ದಂಡವನ್ನು ಪಾವತಿಸದೆ ಆಗಸ್ಟ್ 31ರೊಳಗೆ ಮರುಪಾವತಿ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಾಲ ಮರುಪಾವತಿ ದಿನಾಂಕವನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರವು ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಸಾಲ ನವೀಕರಿಸಲು ಅಥವಾ ಮರುಪಾವತಿ ಮಾಡಲು ರೈತರು ಬ್ಯಾಂಕ್ಗಳತ್ತ ತೆರಳುವುದನ್ನು ತಪ್ಪಿಸಲು ನೆರವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದೆಯೂ ಕೂಡ ಸಾಲ ಮರು ಪಾವತಿಯ ದಿನಾಂಕವನ್ನು ಕೇಂದ್ರ ಸರ್ಕಾರ ಮುಂದೂಡಿಕೆ ಮಾಡಿತ್ತು. ಈ ಮೊದಲು ಮೇ 31ರವರೆಗೆ ವಿಸ್ತರಿಸಲಾಯಿತು. ಸಾಮಾನ್ಯವಾಗಿ, ಕೃಷಿ ಸಾಲಗಳು ಶೇ 9ರಷ್ಟು ಬಡ್ಡಿದರ ಹೊಂದಿರುತ್ತವೆ. ಆದರೆ ರೈತರು ವಾರ್ಷಿಕ ಶೇ 7ರಷ್ಟು ಬಡ್ಡಿ ದರದಲ್ಲಿ 3 ಲಕ್ಷ ರೂ. ಅಲ್ಪಾವಧಿಯ ಕೃಷಿ ಸಾಲ ಪಡೆಯಲು ಸರ್ಕಾರ ಶೇ 2ರಷ್ಟು ಬಡ್ಡಿ ಸಹಾಯಧನ ನೀಡುತ್ತಿದೆ.
ಸಾಲವನ್ನು ಸಮಯೋಚಿತವಾಗಿ ಮರುಪಾವತಿಸುವ ರೈತರಿಗೆ ಬಡ್ಡಿದರವು ಶೇ 4ಕ್ಕೆ ಕಡಿಮೆ ಆಗುತ್ತದೆ. ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರವು ಈ ವರ್ಗದ ರೈತರಿಗೆ ಪ್ರಯೋಜನ ನೀಡಲಿದೆ. ಆಗಸ್ಟ್ 31ರ ಮೊದಲು ತಮ್ಮ ಸಾಲವನ್ನು ಮರುಪಾವತಿಸುವ ರೈತರಿಗೆ ಶೇ 4ರಷ್ಟು ರಿಯಾಯಿತಿ ಬಡ್ಡಿದರ ವಿಧಿಸಲಾಗುತ್ತದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.