ನವದೆಹಲಿ : ವಿವಿಧ ದೇಶಗಳ ಕೋವಿಡ್-19 ಹಾಟ್‌ಸ್ಪಾಟ್‌ಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಜಾಗತಿಕ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ಸಮಗ್ರ ಮತ್ತು ಪ್ರಾಯೋಗಿಕ ವಿಧಾನವನ್ನು ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮತ್ತು ನಿಯೋಗಗಳು ಹೊಂದಿಲ್ಲದಿರುವುದು ಕಳವಳಕಾರಿ ಸಂಗತಿ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಜಾಗತಿಕ ಲಾಕ್‌ಡೌನ್ ಸಮಯದಲ್ಲಿ ಭಾರತವು ಸೇರಿ ಅನೇಕ ದೇಶಗಳು ತಮ್ಮ ನಾಗರಿಕರನ್ನು ರಕ್ಷಿಸಲು ವಿಶೇಷ ವಿಮಾನಗಳನ್ನು ಕಳುಹಿಸುವುದು ಸೇರಿದಂತೆ ಅನೇಕ ಪ್ರಯತ್ನ ಕೈಗೊಂಡಿವೆ ಎಂದಿದ್ದಾರೆ. "ಭಾರತ ಸರ್ಕಾರವು ಅನಿವಾಸಿ ಭಾರತೀಯರನ್ನ ಕೈಬಿಡಲು ಸಾಧ್ಯವಿಲ್ಲ ಮತ್ತು ವಿದೇಶದಲ್ಲಿ ಕೋವಿಡ್-19 ಹಾಟ್‌ಸ್ಪಾಟ್‌ಗಳಲ್ಲಿ ಸಿಲುಕಿರುವ ನಾಗರಿಕರನ್ನು ರಕ್ಷಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ವಿಶೇಷವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ವಿದೇಶದಲ್ಲಿ ವಾಸಿಸುವ ಅನಿವಾಸಿ ಭಾರತೀಯರ ರಕ್ಷಣೆಯ ಬಗ್ಗೆ ಕೇಂದ್ರವು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಅನೌಪಚಾರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಹೆಚ್ಚಿನ ಜನರು ತಾತ್ಕಾಲಿಕ ಕಾರ್ಮಿಕ ಶಿಬಿರಗಳಲ್ಲಿ ವಾಸಿಸುತ್ತಿರುವುದರಿಂದ ಸಾಮಾಜಿಕ ಅಂತರ ಅನುಸರಿಸಲು ಸಾಧ್ಯವಾಗುತ್ತಿಲ್ಲ. ಸಮುದಾಯ ಪ್ರಸರಣದ ಭಯ ಮತ್ತು ವೈದ್ಯಕೀಯ ಸೌಲಭ್ಯದ ಕೊರತೆ ಇದೆ. ಹೀಗಾಗಿ ಭಾರತ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.