ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗೋಲ್ಡನ್ ಬಾಬಾ ಖ್ಯಾತಿಯ ಸುಧೀರ್ ಕುಮಾರ್ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರಿಗೆ 58 ವರ್ಷ ವಯಸ್ಸಾಗಿತ್ತು.
ಮಕ್ಕರ್ ಅಲಿಯಾಸ್ ಗೋಲ್ಡನ್ ಬಾಬಾ ಎದೆನೋವು, ಕ್ಯಾನ್ಸರ್, ಡಯಾಬಿಟಿಸ್, ಥೈರಾಯಿಡ್ ಸೇರಿದಂತೆ ಮತ್ತಿತರ ಖಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೂಲತ: ಉತ್ತರಪ್ರದೇಶದ ಗಾಜಿಯಾಬಾದ್ ನಿವಾಸಿಯಾಗಿದ್ದು ದೆಹಲಿಯ ಗಾಂಧಿನಗರದಲ್ಲಿ ವಾಸವಿದ್ದರು. ಬಟ್ಟೆ ವ್ಯಾಪಾರದ ಮೂಲಕ ವೃತ್ತಿ ಆರಂಭಿಸಿದ ಬಾಬಾ ನಂತರದ ದಿನಗಳಲ್ಲಿ ಸ್ವಾಮೀಜಿ ದೀಕ್ಷೆ ಪಡೆದುಕೊಂಡು ಆಶ್ರಮ ಆರಂಭಿಸಿದ್ದರು. ಚಿನ್ನದ ಮೇಲೆ ಇವರಿಗೆ ಇನ್ನಿಲ್ಲದ ವ್ಯಾಮೋಹವಿತ್ತು. ಹೀಗಾಗಿ ತನ್ನ ಮೈಮೇಲೆ ಕೆ.ಜಿಗಟ್ಟಲೆ ಆಭರಣಗಳನ್ನು ಧರಿಸುತ್ತಿದ್ದರು. 20 ಕೆ.ಜಿ ಬಂಗಾರ, ರೋಲೆಕ್ಸ್ ವಾಚ್ ಧರಿಸಿ ಸುತ್ತಾಡುತ್ತಾ ಇವರು ಗಮನ ಸೆಳೆಯುತ್ತಿದ್ದರು.
ಅಪಹರಣ, ದರೋಡೆ, ಕೊಲೆ ಬೆದರಿಕೆ ಸೇರಿ ಅನೇಕ ಕ್ರಿಮಿನಲ್ ಕೇಸ್ಗಳೂ ಇವರ ಮೇಲಿದ್ದವು. ಕಳೆದ ವರ್ಷ ತಮ್ಮ ಆಶ್ರಮದಲ್ಲಿ ಅದ್ಧೂರಿ ಕುಂಭಮೇಳವನ್ನು ಇವರು ಆಯೋಜಿಸಿದ್ದರು.