ಹೈದರಾಬಾದ್: ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಣೆ ಮಾಡಿದ್ದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಇಲ್ಲಿಯವರೆಗೆ ಜಾಗತಿಕವಾಗಿ 5 ಲಕ್ಷದ 90 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, 27 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೊರೊನಾ ವೈರಸ್ ಜಾಗತಿಕ ಆರ್ಥಿಕತೆಗೆ ಬಹುದೊಡ್ಡ ಶಾಕ್ ನೀಡಿದೆ. ಶುಕ್ರವಾರವಷ್ಟೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2.2 ಟ್ರಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ನೆರವಿನ ಪ್ಯಾಕೇಜ್ಗೆ ಒಪ್ಪಿಗೆ ನೀಡಿ ಸಹಿ ಹಾಕಿದ್ದಾರೆ. ಈ ನಡುವೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಅಮೆರಿಕ ಮತ್ತು ಇತರ ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ಗಮನಿಸುತ್ತಿವೆ.
ಈ ಕೊರೊನಾ ಸೋಂಕು ಹೆಚ್ಚಿನ ಜನರಿಗೆ ಕಡಿಮೆ ಅಥವಾ ಮಧ್ಯಮ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಮತ್ತೆ ಕೆಲವರು ವಿಶೇಷವಾಗಿ ವಯಸ್ಸಾದವರಿಗೆ ಮತ್ತು ಈಗಾಗಲೆ ಅನಾರೋಗ್ಯಕ್ಕೆ ತುತ್ತಾದವರಿಗೆ ಗಂಭೀರ ಪರಿಣಾಮ ಬೀರುವುದಲ್ಲದೆ, ಸಾವಿಗೂ ಕಾರಣವಾಗಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ 1,30,000ಕ್ಕೂ ಹೆಚ್ಚು ಜನರು ಈ ಮಾರಕ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.