ಭೋಪಾಲ್: ಚುನಾವಣಾ ಆಯೋಗ ನಿಗದಿಪಡಿಸಿರುವ ಗರಿಷ್ಠ ₹ 75 ಲಕ್ಷ ಚುನಾವಣಾ ವೆಚ್ಚ ಮಾಡಲು ಆಗದ ಸಮಾಜವಾದಿ ಪಕ್ಷದ (ಎಸ್ಪಿ) ಮಾಜಿ ಶಾಸಕ ಕಿಶೋರೆ ಸಮ್ರಿತೆ, 'ಚುನಾವಣಾ ವೆಚ್ಚಕ್ಕೆ ಕಿಡ್ನಿ ಮಾರಾಟ ಮಾಡಲು ಅವಕಾಶ ನೀಡುವಂತೆ' ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
'ಕೇಂದ್ರ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಗರಿಷ್ಠ ₹ 75 ಲಕ್ಷ ಖರ್ಚಿನ ಮಿತಿ ವಿಧಿಸಿದೆ. ನನ್ನಲ್ಲಿ ಖರ್ಚು ಮಾಡಲು ಅಷ್ಟೊಂದು ಹಣವಿಲ್ಲ. ಸಾಲ ಅಥವಾ ಆಯೋಗವೇ ₹ 75 ಲಕ್ಷ ನೀಡುವಂತೆ ಕೋರಿದ್ದೇನೆ. ಇಲ್ಲವೇ ನನ್ನ ಒಂದು ಕಿಡ್ನಿ ಮಾರಲು ಅನುವುಮಾಡಿಕೊಡುವಂತೆ' ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಪ್ರಚಾರಕ್ಕೆ ಇನ್ನು 15 ದಿನಗಳಷ್ಟ ಬಾಕಿ ಇದೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹಿಸಲು ಆಗುವುದಿಲ್ಲ. ಈ ಒಂದು ಕಾರಣಕ್ಕೆ ನನ್ನ ದೇಹದ ಮುಖ್ಯವಾದ ಅಂಗವನ್ನೇ ಮಾರಾಟಕ್ಕೆ ಇರಿಸಲು ಬಯಸಿದ್ದೇನೆ. ನನ್ನ ವಿರುದ್ಧ ಸ್ಪರ್ಧಿಸುತ್ತಿರುವ ಎಲ್ಲರೂ ಭ್ರಷ್ಟಚಾರಿಗಳು. ಅವರು ಸ್ಥಳೀಯರಿಂದ ಹಣವನ್ನು ಪಡೆದುಕೊಂಡಿದ್ದಾರೆ. ನಾನು ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಬಡವರನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.